ADVERTISEMENT

‘ಠಾಕ್ರೆ ಸರ್ಕಾರ್’

ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:02 IST
Last Updated 28 ನವೆಂಬರ್ 2019, 19:02 IST
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ ಅವರು ಮಂಡಿಯೂರಿ ನಮಸ್ಕರಿಸಿದರು    ಪಿಟಿಐ ಚಿತ್ರ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ ಅವರು ಮಂಡಿಯೂರಿ ನಮಸ್ಕರಿಸಿದರು    ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು. ಸೇನಾ–ಎನ್‌ಸಿಪಿ–ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮೂರೂ ಪಕ್ಷಗಳತಲಾ ಇಬ್ಬರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಶಿವಸೇನಾದ ದಸರಾ ಸಂಭ್ರಮ ಆಚರಣೆಯ ಪ್ರಮುಖ ಸ್ಥಳ ಶಿವಾಜಿ ಪಾರ್ಕ್‌ನಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಉದ್ಧವ್‌ ಹಾಗೂ ಆರು ಸಚಿವರಿಗೆ ಪ್ರಮಾಣವಚನ ಬೋಧಿ
ಸಿದರು. ಶಿವಸೇನಾದಿಂದ ಏಕನಾಥ ಶಿಂಧೆ, ಸುಭಾಷ್ ದೇಸಾಯಿ, ಎನ್‌ಸಿಪಿ
ಯಿಂದ ಜಯಂತ್ ಪಾಟೀಲ್, ಛಗನ್‌ ಭುಜಬಳ, ಕಾಂಗ್ರೆಸ್‌ನಿಂದ ಬಾಳಾ
ಸಾಹೇಬ್‌ ಥೋರಟ್ ಹಾಗೂ ನಿತಿನ್ ರಾವುತ್ ಅವರು ಸಚಿವರಾಗಿದ್ದಾರೆ.

ಬಿಜೆಪಿ ಜತೆಗಿನ ಸಖ್ಯ ತೊರೆದು ವಾಪಸಾಗಿರುವ ಎನ್‌ಸಿಪಿಯ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ
ಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಊಹಾಪೋಹ ಇತ್ತು. ಆದರೆ ಪಕ್ಷದಿಂದ ಇಬ್ಬರು ಮಾತ್ರ ಸಚಿವರಾಗಿದ್ದಾರೆ.ಅಜಿತ್ ಪವಾರ್ ಜತೆ ಸೇರಿ ಸರ್ಕಾರ ರಚಿಸಿದ್ದ ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ಸಂಖ್ಯಾಬಲದ ಕೊರತೆಯಿಂದ ರಾಜೀನಾಮೆ ನೀಡಿದ್ದರು. ಬಳಿಕ ಉದ್ಧವ್ ನೇತೃತ್ವದ ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟವು ಸಾಕಷ್ಟು ನಾಟಕೀಯ ಬೆಳವಣಿಗೆಗಳ ಬಳಿಕ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ.

ADVERTISEMENT

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಅಹ್ಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮೊದಲಾದವರು ಸಾಕ್ಷಿಯಾದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದಿರಲಿಲ್ಲ. ಉದ್ಧವ್ ಹಾಗೂ ಕಾಂಗ್ರೆಸ್‌ನಿಂದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯ ಘಟಕದ ಅಧ್ಯಕ್ಷ ಬಾಳಾಸಾಹೇಬ್ ಥೋರಟ್‌ಗೆ ಸಂದೇಶ ಕಳುಹಿಸಿದ್ದಾರೆ. ಸರ್ಕಾರವು ಸ್ಥಿರ ಹಾಗೂ ಜವಾಬ್ದಾರಿಯುತ ಆಡಳಿತ ನೀಡಲಿದೆ ಎಂಬ ಆಶಾಭಾವವನ್ನು ಸೋನಿಯಾ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.