ADVERTISEMENT

Maharashtra Election Results: ಸೈದ್ಧಾಂತಿಕ ಸ್ಥಿತ್ಯಂತರ; ಸೋಲು–ಗೆಲುವು

ಮೃತ್ಯುಂಜಯ ಬೋಸ್
Published 23 ನವೆಂಬರ್ 2024, 21:38 IST
Last Updated 23 ನವೆಂಬರ್ 2024, 21:38 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ–ಬಿಜೆಪಿ ಮೈತ್ರಿಕೂಟದ ಸರ್ಕಾರವಿದ್ದ ಕಾಲವದು (1995–99). ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆ ಅವರು, ಅವರೇ ಹೇಳುತ್ತಿದ್ದ ಹಾಗೆ ‘ರಿಮೋಟ್‌ ಕಂಟ್ರೋಲ್‌’ ಮೂಲಕ ಸರ್ಕಾರದ ಮೂಗುದಾರವನ್ನು ಹಿಡಿದುಕೊಂಡಿರುತ್ತಿದ್ದರು.

ಇನ್ನು ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಲಾಲ್‌ಕೃಷ್ಣ ಅಡ್ವಾಣಿ ಅವರ ಜೋಡಿಯು ಬಿಜೆಪಿಯನ್ನು ಮುನ್ನಡೆಸುತ್ತಿದ್ದರು. ಇವರ ಕಟ್ಟಾಳುಗಳಾಗಿ ಪ್ರಮೋದ್‌ ಮಹಾಜನ್‌ ಹಾಗೂ ಗೋಪಿನಾಥ ಮುಂಡೆ ಅವರಿದ್ದರು. ಈ ಇಬ್ಬರಿಗೂ ಬಾಳಾ ಸಾಹೇಬ್‌ ಅವರ ಜೊತೆ ನೇರ ಸಂಪರ್ಕವಿತ್ತು.

ಬಾಳಾ ಸಾಹೇಬ್‌ ಠಾಕ್ರೆ ಅವರ ಮರಣದ ನಂತರ ಉದ್ಧವ್‌ ಠಾಕ್ರೆ ಅವರು ಶಿವಸೇನಾದ ಕಾರ್ಯಕಾರಿ ಅಧ್ಯಕ್ಷರಾದ ಮೇಲೆ ಬದಲಾವಣೆಗಳು ಆಗಲಾರಂಭಿಸಿದವು. ಪಕ್ಷದೊಳಗೆ ಹೊಸ ಹೊಸ ವಿಚಾರಗಳನ್ನು ಪರಿಚಯಿಸಿದರು. 2014–19ರ ಐದು ವರ್ಷಗಳಲ್ಲಿ ಶಿನಸೇನಾ ಹಾಗೂ ಬಿಜೆಪಿಯ ಸಂಬಂಧವೂ ಹಳಸಿತು.

ADVERTISEMENT

2019ರ ವಿಧಾನಸಭೆ ಚುನಾವಣೆ ಬಳಿಕವಂತೂ ಬಿಜೆಪಿಯ ಜೊತೆಗಿನ 30 ವರ್ಷಗಳ ಮೈತ್ರಿಯನ್ನು ಉದ್ಧವ್‌ ಕಡಿದುಕೊಂಡರು. ಕಾಂಗ್ರೆಸ್‌–ಎನ್‌ಸಿಪಿ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು. ಉದ್ಧವ್‌ ಅವರು ಈ ನಿರ್ಧಾರವು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಅಸಮಾಧಾನಕ್ಕೆ ಕಾರಣವಾಯಿತು.

ಏಕನಾಥ ಶಿಂದೆ

ರಿಮೋಟ್‌ ಕಂಟ್ರೋಲ್‌’ನಿಂದ ‘ಡೈರೆಕ್ಟ್‌ ಕಂಟ್ರೋಲ್‌’ವರೆಗೆ

ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಆದ ಬಳಿಕ ಬಾಳಾ ಸಾಹೇಬ್‌ ಠಾಕ್ರೆ ಅವರ ‘ರಿಮೋಟ್‌ ಕಂಟ್ರೋಲ್‌’ ಕಾರ್ಯವಿಧಾನವು ‘ಡೈರೆಕ್ಟ್‌ ಕಂಟ್ರೋಲ್‌’ ಕಾರ್ಯವಿಧಾನಕ್ಕೆ ಬದಲಾಯಿತು. ಕಳೆದ ಐದು ವರ್ಷಗಳಲ್ಲಿ ಠಾಕ್ರೆ ಕುಟುಂಬವು ಅಸ್ತಿತ್ವ ಉಳಿಸಿಕೊಳ್ಳುವ ಸಂಘರ್ಷದಲ್ಲಿದೆ. ಏಕನಾಥ ಶಿಂದೆ ಅವರು ಸರ್ಕಾರವನ್ನು ಬೀಳಿಸಿ ತಮ್ಮದೇ ನಿಜವಾದ ಶಿವಸೇನೆ ಎಂದು ಗಟ್ಟಿ ದನಿಯಲ್ಲಿ ವಾದಿಸುತ್ತಿರುವಾಗಲೇ ಉದ್ಧವ್‌ ಅವರು ತಮ್ಮ ಬಣದ ಶಿವಸೇನಾವನ್ನು ಮುನ್ನಡೆಸುತ್ತಿದ್ದಾರೆ. ಶಿಂದೆ ಅವರದ್ದೇ ನಿಜವಾದ ಶಿವಸೇನೆ ಎಂದು ಸ್ಪೀಕರ್‌ ಮುದ್ರೆ ಒತ್ತಿದ್ದಾರೆ. ಆದರೆ ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಉದ್ಧವ್‌ ಬಣ: ಒಗ್ಗಟ್ಟು ಕಷ್ಟಸಾಧ್ಯ

‘ಈ ವಿಧಾನಸಭಾ ಫಲಿತಾಂಶದ ಕಾರಣದಿಂದ ಉದ್ಧವ್ ಠಾಕ್ರೆ ಅವರಿಗೆ ತಮ್ಮ ಪಕ್ಷದ ಎಲ್ಲರನ್ನೂ ಒಗ್ಗಟ್ಟಿನಿಂದ ಇರಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ಕಷ್ಟಸಾಧ್ಯವಾಗಬಹುದು’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಪ್ರಕಾಶ್ ಅಂಕೋಲ್ಕರ್‌. ಫಲಿತಾಂಶವು ಉದ್ಧವ್‌ ಠಾಕ್ರೆ ಅವರಿಗೆ ತೀವ್ರ ಹಿನ್ನಡೆಯನ್ನೇ ಉಂಟುಮಾಡಿದೆ. ತೀವ್ರ ಮುಖಭಂಗವೂ ಆಗಿದೆ. ಇಂಥ ಹೊತ್ತಿನಲ್ಲಿ ಠಾಕ್ರೆ ಅವರು ಮತ್ತೊಮ್ಮೆ ಎದ್ದು ಬರುವುದು ಕಷ್ಟವಾಗಬಹುದು. ಉದ್ಧವ್‌ ಬಣದ ಶಾಸಕರನ್ನು ಏಕನಾಥ ಶಿಂದೆ ಅವರು ಸಂಪರ್ಕಿಸಬಹುದು. ಮುಂದಿನ ದಿನಗಳಲ್ಲಿ ಉದ್ಧವ್‌ ಬಣದ ಶಾಸಕರು ಬೇರೆಯದೇ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತ್ಯೆಯನ್ನು ಅಲ್ಲಗಳೆಯಲಾಗದು. ಉದ್ಧವ್‌ ಅವರ ಮಗ ಆದಿತ್ಯ ಠಾಕ್ರೆ ಅವರು ವರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಹೇಗೊ ಗೆಲುವು ಸಾಧಿಸಿದ್ದಾರೆ. ಆದಿತ್ಯ ಅವರ ತಾಯಿಯ ಸಂಬಂಧಿಯ ಮಗ ವರುಣ್‌ ಸರ್ದೇಸಾಯಿ ಅವರೂ ಪೂರ್ವ ಬಾಂದ್ರಾ ಕ್ಷೇತ್ರದಿಂದ ಜಯಗಳಿಸಿದ್ದಾರೆ.

ಯಾರದ್ದು ನೈಜ ಶಿವಸೇನಾ?

ನಿಜವಾದ ಶಿವಸೇನಾ ಯಾರದ್ದು ಹಾಗೂ ಯಾರು ಬಾಳಾ ಸಾಹೇಬ್‌ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎನ್ನುವುದು ಈ ಫಲಿತಾಂಶವು ಪ್ರತಿಫಲಿಸಿದೆ
ಏಕನಾಥ ಶಿಂದೆ ಮುಖ್ಯಮಂತ್ರಿ
ನಾನು ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯುತ್ತಿದ್ದೇನೆ. ಚುನಾವಣೆ ಮುಗಿದಿದೆ. ಆದರೂ ಇನ್ನೂವರೆಗೂ ತೀರ್ಪು ಹೊರಬರದಿರುವುದು ನನ್ನಲ್ಲಿ ಆಶ್ಚಯ ಮೂಡಿಸಿದೆ
ಉದ್ಧವ್‌ ಠಾಕ್ರೆ, ಶಿನಸೇವಾ (ಉದ್ಧವ್‌ ಬಣ) ಮುಖ್ಯಸ್ಥ
ಮಹಾರಾಷ್ಟ್ರ ಸೋಲು ಅನಿರೀಕ್ಷಿತವಾಗಿದೆ. ಎಂವಿಎಗೆ ಮತ ನೀಡಿದ ಜನತೆಗೆ ಕೃತಜ್ಞತೆಗಳು. ಬಹುದೊಡ್ಡ ಜನಾದೇಶ ನೀಡಿದ ಜಾರ್ಖಂಡ್‌ ಮತದಾರರಿಗೆ ಹಾಗೂ ನಮ್ಮ ಗೆಲುವಿಗಾಗಿ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳು
ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಮಹಾರಾಷ್ಟ್ರ ಚುನಾವಣಾ ಫಲಿತಾಂಶವು ನಮ್ಮ ಅಭಿವೃದ್ಧಿ ಕಾರ್ಯಗಳು ಹಾಗೂ ಮಾದರಿ ಆಡಳಿತಕ್ಕೆ ಸಿಕ್ಕ ಗೆಲುವು. ರಾಜ್ಯದ ಅಭಿವೃದ್ಧಿಗೆ ನಮ್ಮ ಕೊಡುಗೆಗೂ ಸಂದ ಜಯ. ಕಾಂಗ್ರೆಸ್‌ನ ಸುಳ್ಳಿಗೆ ಆಗಿರುವ ಸೋಲು
ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.