ಮುಂಬೈ: ‘ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷವೇ ತಿಳಿಯದೆ ಇರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿರುವುದಕ್ಕೆ ಶಿವಸೇನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವರನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು.
ಸೋಮವಾರ ರಾಯಗಡದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನಾರಾಯಣ ರಾಣೆ, ‘ಮುಖ್ಯಮಂತ್ರಿಯವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷ ತಿಳಿಯದಿರುವುದು ಅವಮಾನಕರ ವಿಷಯ, ನಾನು ಸ್ಥಳದಲ್ಲೇನಾದರೂ ಇದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ಹೇಳಿದ್ದರು.
ನಾರಾಯಣ ರಾಣೆ ಅವರ ಈ ಹೇಳಿಕೆಗೆ ಶಿವಸೇನಾ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹಲವೆಡೆ ಭಿತ್ತಿಪತ್ರಗಳನ್ನೂ ಅಂಟಿಸಿದ್ದಾರೆ ಹಾಗೂ ‘ಕೋಂಬ್ಡಿ ಚೋರ್’ (ಕೋಳಿ ಕಳ್ಳ) ಎಂದು ಮೂದಲಿಸಿದ್ದಾರೆ. ಐದು ದಶಕಗಳ ಹಿಂದೆ ಚೆಂಬೂರ್‌ನಲ್ಲಿ ನಾರಾಯಣ ರಾಣೆ ಅವರು ಕೋಳಿ ಅಂಗಡಿ ಇಟ್ಟುಕೊಂಡಿದ್ದನ್ನು ಉಲ್ಲೇಖಿಸಿ ಈ ಟೀಕೆ ಮಾಡಲಾಗಿದೆ.
‘ರಾಣೆ ಅವರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಬಿಜೆಪಿ ನಾಯಕರನ್ನು ಸಂತುಷ್ಟಿಗೊಳಿಸಲು ಅವರು ಶಿವಸೇನಾ ಪಕ್ಷ ಮತ್ತು ಅದರ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಣೆ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ರತ್ನಗಿರಿ ಸಿಂಧುದುರ್ಗದ ಸಂಸದ ವಿನಾಯಕ ರಾವುತ್ ಒತ್ತಾಯಿಸಿದ್ದಾರೆ.
ವಿಷಾದಿಸದ ಬಿಜೆಪಿ:‘ನಾರಾಯಣ ರಾಣೆ ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ ನಾನು ಅವರ ಹೇಳಿಕೆಗಾಗಿ ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲ’ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.