ವಯನಾಡು (ಕೇರಳ): ಜಿಲ್ಲೆಯಲ್ಲಿ ಪದೇ ಪದೇ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಕೇರಳ ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆಯನ್ನು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಯುಡಿಎಫ್ ಬಹಿಷ್ಕರಿಸಿವೆ.
ಇತ್ತೀಚೆಗೆ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿದ್ದರು, ಪ್ರತಿಭಟನಾ ನಿರತ ಜಿಲ್ಲೆಗೆ ಭೇಟಿ ನೀಡದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ, ಪ್ರತಿಪಕ್ಷ ಪ್ರತಿನಿಧಿಗಳಾದ ಟಿ. ಸಿದ್ಧಿಕ್ ಮತ್ತು ಐ. ಸಿ ಬಾಲಕೃಷ್ಣನ್ ಅವರು ಸಭೆಯಿಂದ ಹೊರನಡೆದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಿದ್ಧಿಕ್, ‘ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸುವ ಮೂಲಕ ಸಭೆ ನಡೆಸಬೇಕಿತ್ತು. ಅಲ್ಲದೆ, ಘಟನೆ ಕುರಿತಂತೆ ಕ್ರಮ ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ ಹೊರತು ಚರ್ಚೆಯಲ್ಲ. ಪದೇ ಪದೇ ವನ್ಯಜೀವಿಗಳ ದಾಳಿಗೆ ತುತ್ತಾಗುತ್ತಿರುವ ಜನರ ಸಂಕಷ್ಟವನ್ನು ಅರಿಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡ ಖುದ್ದು ಜಿಲ್ಲೆಗೆ ಆಗಮಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಇನ್ನೂ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡದ ಅರಣ್ಯ ಸಚಿವರ ಜತೆ ನಾವು ಸಭೆಯಲ್ಲಿ ಭಾಗವಹಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
‘ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಣೆ, ಸಾಲ ಮನ್ನಾ, ಮಾನಂದವಾಡಿ ವೈದ್ಯಕೀಯ ಕಾಲೇಜಿನ ಸೌಲಭ್ಯಗಳ ಸುಧಾರಣೆ ಸೇರಿದಂತೆ ಜಿಲ್ಲೆಯ ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಈಗಾಗಲೇ ನಡೆದ ವಿವಿಧ ಸಭೆಗಳಲ್ಲಿ ಚರ್ಚಿಸಲಾಗಿದೆ. ಆದ್ದರಿಂದ, ಈ ಸಮಯದಲ್ಲಿ ಚರ್ಚೆಗಳ ಅಗತ್ಯವಿಲ್ಲ, ಬದಲಾಗಿ ಕ್ರಮದ ಅಗತ್ಯವಿದೆ. ಆದರೆ, ಸರ್ಕಾರವು ಇನ್ನೂ ಹೆಚ್ಚಿನ ಚರ್ಚೆಗಳನ್ನು ನಡೆಸಿ ವಯನಾಡು ಜನರನ್ನು ವಂಚಿಸಲು ಪ್ರಯತ್ನಿಸುತ್ತಿದೆ’ ಎಂದು ಸಿದ್ಧಿಕ್ ಹೇಳಿದ್ದಾರೆ.
‘ಅರಣ್ಯ ಸಚಿವರು ಅಥವಾ ಇತರ ಸಚಿವರ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ಸಿಎಂ ಪಿಣರಾಯಿ ವಿಜಯನ್ ಅವರು ಭೇಟಿ ನೀಡಿ ವಯನಾಡು ಜನರ ಸಮಸ್ಯೆಗಳನ್ನು ಆಲಿಸಬೇಕು’ ಎಂದು ಬಾಲಕೃಷ್ಣನ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.