ಚೆನ್ನೈ: ಸನಾತನ ಧರ್ಮದ ಕೆಲ ‘ಅಮಾನವೀಯ ಸಿದ್ಧಾಂತ’ಗಳ ಬಗ್ಗೆ ಪುತ್ರ, ಸಚಿವ ಉದಯನಿಧಿ ಹೇಳಿದ್ದಾರೆ. ಹತಾಶೆಗೊಂಡಿರುವ ಬಿಜೆಪಿ ಇದೇ ನೆಪದಲ್ಲಿ ‘ಇಂಡಿಯಾ’ದಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.
ವಿವಾದ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಅವರು, ‘ಸನಾತನ ಧರ್ಮದ ದಮನಕಾರಿ ಸಿದ್ಧಾಂತ ಕುರಿತಂತೆ ಉದಯನಿಧಿಯವರ ನಿಲುವು ಸಹಿಸಲಾಗದ ಬಿಜೆಪಿ ಪರ ಶಕ್ತಿಗಳು, ಅವರು ನರಮೇಧಕ್ಕೆ ಕರೆ ನೀಡಿದರು ಎಂದು ಅಪಪ್ರಚಾರ ಮಾಡುತ್ತಿವೆ ಎಂದು ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸ್ಟಾಲಿನ್, ‘ಅಪಪ್ರಚಾರ ಮಾಡುವವರ ಜೊತೆಗೆ ಈಗ ಪ್ರಧಾನಿ ನರೇದ್ರ ಮೋದಿ ಅವರು ಕೈಜೋಡಿಸಿರುವುದು ತಮಗೆ ಆಶ್ಚರ್ಯ ಮೂಡಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಉದಯನಿಧಿ ಅವರು ದಮನಕಾರಿ ಚಿಂತನೆ ವಿರುದ್ಧ ಮಾತನಾಡಿದ್ದಾರೆ. ಇಂಥ ಚಿಂತನೆ ಆಧರಿಸಿದ ಆಚರಣೆಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ. ಪರಿಶಿಷ್ಟರು, ಬುಡಕಟ್ಟು ಜನರು, ಮಹಿಳೆಯರ ವಿರುದ್ಧದ ತಾರತಮ್ಯ ಧೋರಣೆ ಕುರಿತು ಮಾತನಾಡಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ಧರ್ಮ ಮತ್ತು ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ’ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
‘ಬಿಜೆಪಿ ಬೆಳೆಸಿರುವ ಸಾಮಾಜಿಕ ಜಾಲತಾಣದ ಸಮೂಹವು ಉತ್ತರದ ರಾಜ್ಯಗಳಲ್ಲಿ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ಆದರೆ, ಉದಯನಿಧಿ ಅವರು ಎಂದಿಗೂ ನರಮೇಧ ಪದವನ್ನು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಬಳಸಿಲ್ಲ. ಆದರೆ, ಸುಳ್ಳು ವ್ಯಾಪಕವಾಗುತ್ತಿದೆ’ ಎಂದು ಹೇಳಿದ್ದಾರೆ.
‘ಉದಯನಿಧಿ ನಿರಾಕರಣೆಯ ನಂತರವೂ ಕೇಂದ್ರ ಸಚಿವರು ತಮ್ಮ ಹೇಳಿಕೆಗೆ ಕಡಿವಾಣ ಹಾಕುತ್ತಿಲ್ಲ. ಪ್ರಧಾನಿ ಈಗ ತಕ್ಕ ಉತ್ತರ ನೀಡಬೇಕು ಎಂದಿದ್ದಾರೆ. ವಸ್ತುಸ್ಥಿತಿ ಪರಿಶೀಲಿಸಲು, ವರದಿ ಪಡೆಯುವ ಎಲ್ಲ ಅವಕಾಶ ಪ್ರಧಾನಿಯವರಿಗಿದೆ. ಈಗ ನಡೆದಿರುವ ಸುಳ್ಳು ಪ್ರಚಾರದ ಅರಿವಿಲ್ಲದೆಯೇ ಪ್ರಧಾನಿ ಈಗ ಹೇಳಿಕೆ ನೀಡಿದ್ದಾರೆಯೇ? ಅಥವಾ ಗೊತ್ತಿದ್ದೂ ನೀಡಿದ್ದಾರೆಯೇ’ ಎಂದು ಎಂ.ಕೆ.ಸ್ಟಾಲಿನ್ ಪ್ರಶ್ನಿಸಿದ್ದಾರೆ.
ತಿರುಚಲಾದ ವಿಡಿಯೊ ಕುರಿತಂತೆ ವಾಸ್ತವ ಸ್ಥಿತಿಯನ್ನು ತಿಳಿಯದೆಯೇ ಪ್ರಧಾನಿ ಇತ್ತೀಚಿಗೆ ಸಂಸತ್ತಿನಲ್ಲಿ ಸಂಪುಟ ಸಹೋದ್ಯೋಗಿ ಇ.ವಿ.ವೇಲು ಅವರ ಕುರಿತು ಮಾತನಾಡಿ, ಕೆಲ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು ಎಂದು ಉಲ್ಲೇಖಿಸಿದ್ದಾರೆ.
‘ಈ ಎಲ್ಲವನ್ನು ಗಮನಿಸುವುದಾದರೆ ಭರವಸೆಗಳನ್ನು ಈಡೇರಿಸಲು ವಿಫಲರಾಗಿರುವ ಪ್ರಧಾನಿ ಜನರ ಗಮನ ಬೇರೆಡೆ ಸೆಳೆಯಲು ಈ ಮೂಲಕ ಯತ್ನಿಸುತ್ತಿದ್ದಾರೆ. ಇಂಥ ನಾಯಕರು ನಿಜವಾಗಿ ಹಿಂದುಳಿದವರು, ಪರಿಶಿಷ್ಟರು, ಮಹಿಳೆಯರ ಹಿತಾಸಕ್ತಿ ರಕ್ಷಿಸುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.
‘ಡಿಎಂಕೆ ವಿಷಯದಲ್ಲಿ ನಮ್ಮ ಚಿಂತನೆ ಮತ್ತು ಗುರಿಯು ಸ್ಪಷ್ಟ ಮತ್ತು ಪಾರದರ್ಶಕವಾಗಿದೆ. ಬಡವರ ಸಂತೋಷವೇ ನಮ್ಮ ಗುರಿ. ನಮ್ಮ ಅಭಿಯಾನವು ಹಿಂದುಳಿದರು, ಪರಿಶಿಷ್ಟರು, ಬುಡಕಟ್ಟುಜನರು, ಅಲ್ಪಸಂಖ್ಯಾತರು, ಮಹಿಳೆಯರ ಅಭಿವೃದ್ಧಿ ಉದ್ದೇಶವೊಂದಿದೆ. ಅದೇ ಕಾರಣಕ್ಕೆ ತಮಿಳುನಾಡಿನ ಜನರು ನಮಗೆ ಈಗ ಆರನೇ ಬಾರಿಗೆ ಆಡಳಿತ ನಡೆಸುವ ಹೊಣೆಯನ್ನು ನೀಡಿದ್ದಾರೆ’ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ.
ಪ್ರಧಾನಿ ಅವರು ಮಣಿಪುರ ಹಿಂಸಾಚಾರ ಅಥವಾ ಸಿಎಜಿ ವರದಿಯಲ್ಲಿನ ಹೆದ್ದಾರಿ ಯೋಜನೆಯ ₹ 7.5 ಲಕ್ಷ ಕೋಟಿ ಅಕ್ರಮ ಕುರಿತಂತೆ ಇದುವರೆಗೆ ಮಾತನಾಡಿಲ್ಲ. ಆದರೆ ಸನಾತನ ಕುರಿತು ಚರ್ಚೆಗೆ ಸಂಪುಟ ಸಭೆ ಕರೆಯುತ್ತಾರೆ.– ಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.