ADVERTISEMENT

‘ನೆಟ್‌’ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಬಿಐನಿಂದ ಯು.ಪಿ ವ್ಯಕ್ತಿಯ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:39 IST
Last Updated 22 ಜೂನ್ 2024, 15:39 IST
ಯುಜಿಸಿ
ಯುಜಿಸಿ   

ನವದೆಹಲಿ (ಪಿಟಿಐ): ಯುಜಿಸಿ– ನೆಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತು ತನಿಖೆ ಆರಂಭಿಸಿರುವ ಸಿಬಿಐ ಶನಿವಾರ ಉತ್ತರ ಪ್ರದೇಶದ ಕುಶಿನಗರದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆಗೆ ಒಳಪಡಿಸಿದೆ.

ಶಂಕಿತ ಆರೋಪಿಯು ಪ್ರಶ್ನೆ ಪತ್ರಿಕೆಯ ಒಂದು ಭಾಗವನ್ನು ‘ಟೆಲಿಗ್ರಾಮ್‌’ ಆ್ಯಪ್‌ನಲ್ಲಿ ಪೋಸ್ಟ್‌ ಮಾಡಿದ್ದ ಎನ್ನಲಾಗಿದ್ದು, ಆತ ರಾಜಸ್ಥಾನದ ಕೋಟಾದಲ್ಲಿ ಪರೀಕ್ಷೆಗೆ ತರಬೇತಿ ಪಡೆದಿದ್ದ ಎಂದು ಗೊತ್ತಾಗಿದೆ.

‘ನೆಟ್‌’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಶಿಕ್ಷಣ ಸಚಿವಾಲಯ ಸಿಬಿಐ ತನಿಖೆಗೆ ವಹಿಸಿದ್ದು, ಸಿಬಿಐ ಈ ಕುರಿತು ಗುರುವಾರ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. 

ADVERTISEMENT

ಕಿರಿಯ ಸಂಶೋಧನಾ ಫೆಲೊ, ಸಹಾಯಕ ಪ್ರಾಧ್ಯಾಪಕರು ಮತ್ತು ಪಿಎಚ್‌.ಡಿ ಪ್ರವೇಶಕ್ಕಾಗಿನ ಅರ್ಹತೆಗಾಗಿ ನಡೆಯುವ ಯುಜಿಸಿ–ನೆಟ್‌ ಪರೀಕ್ಷೆಯು ಜೂನ್‌ 18ರಂದು ದೇಶದಾದ್ಯಂತ ಜರುಗಿತ್ತು.

ಡಾರ್ಕ್‌ನೆಟ್‌ನಲ್ಲಿ ಲಭ್ಯವಿದ್ದ ಪತ್ರಿಕೆ:

ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ‘ಡಾರ್ಕ್‌ನೆಟ್‌’ನಲ್ಲಿ ಲಭ್ಯವಿರುವ ಬಗ್ಗೆ ಮತ್ತು ಇನ್‌ಸ್ಟಾಗ್ರಾಂನಲ್ಲಿ ₹ 5 ಲಕ್ಷದಿಂದ ₹ 6 ಲಕ್ಷಕ್ಕೆ ಮಾರಾಟವಾಗುತ್ತಿರುವ ಕುರಿತು ಗೃಹ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರದ ನ್ಯಾಷನಲ್‌ ಸೈಬರ್‌ ಕ್ರೈಮ್‌ ಥ್ರೆಟ್‌ ಅನಾಲಿಟಿಕ್ಸ್‌ ಯೂನಿಟ್‌ ಯುಜಿಸಿಗೆ ಮಾಹಿತಿ ರವಾನಿಸಿತ್ತು. ಇದನ್ನು ಆಧರಿಸಿ ಶಿಕ್ಷಣ ಸಚಿವಾಲಯವು ಮೇಲ್ನೋಟಕ್ಕೆ ಪರೀಕ್ಷಾ ಪಾರದರ್ಶಕತೆಗೆ ಧಕ್ಕೆಯುಂಟಾಗಿದೆ ಎಂದು ಯುಜಿಸಿ–ನೆಟ್‌ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.