ನವದೆಹಲಿ: ಸುಳ್ಳು ನೆಪ ನೀಡಿ ಆಧಾರ್ ಸಂಖ್ಯೆ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಹೈದರಾಬಾದ್‌ನ 127 ಮಂದಿಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ನೋಟಿಸ್ ಕಳಿಸಿದೆ. ಪೊಲೀಸರಿಂದ ಮಾಹಿತಿ ಪಡೆದ ನಂತರವೇ ಹೈದರಾಬಾದ್‌ನ ಕಚೇರಿಯು ಈ ಮಂದಿಗೆ ನೋಟಿಸ್ ಕಳಿಸಿದೆ ಎಂದು ಯುಐಡಿಎಐ ಮಂಗಳವಾರ ಹೇಳಿದೆ.
ಪೌರತ್ವ ಸಾಬೀತುಪಡಿಸಲು ದಾಖಲೆಯಾಗಿ ಆಧಾರ್‌ನ್ನು ಪರಿಗಣಿಸಲಾಗುವುದಿಲ್ಲ. ಆಧಾರ್ ಪಡೆಯಲು ಅರ್ಜಿ ಸಲ್ಲಿಸುವ ಮೊದಲು 182 ದಿನಗಳ ಕಾಲ ಭಾರತದಲ್ಲಿ ವ್ಯಕ್ತಿಯ ವಾಸಸ್ಥಳವನ್ನು ಖಚಿತಪಡಿಸಿಕೊಳ್ಳುವುದನ್ನು ಯುಐಡಿಎಐ ಆಧಾರ್ ಕಾಯ್ದೆಯಡಿ ಕಡ್ಡಾಯ ಮಾಡಿದೆಎಂದು ಪ್ರಾಧಿಕಾರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ವಲಸಿಗರಿಗೆ ಆಧಾರ್ ನೀಡಬೇಡಿ ಎಂದು ಯುಐಡಿಎಐಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ಸುಳ್ಳು ನೆಪವೊಡ್ಡಿ 127 ಜನರು ಆಧಾರ್ ಪಡೆದಿದ್ದಾರೆ ಎಂದು ರಾಜ್ಯ ಪೊಲೀಸರಿಂದ ಸಿಕ್ಕಿದ ವರದಿ ಆಧರಿಸಿ ಹೈದರಾಬಾದ್‌ನಲ್ಲಿರುವ ಪ್ರಾದೇಶಿಕ ಕಚೇರಿಯು ನೋಟಿಸ್ ಕಳಿಸಿದೆ. ಪ್ರಾಥಮಿಕ ತನಿಖೆ ಪ್ರಕಾರ ಅವರು ಅಕ್ರಮ ವಲಸಿಗರಾಗಿದ್ದು ಆಧಾರ್ ಸಂಖ್ಯೆ ಪಡೆಯಲು ಅರ್ಹತೆ ಹೊಂದಿಲ್ಲ ಎಂದು ತಿಳಿದುಬಂದಿರುವುದಾಗಿ ಯುಐಡಿಎಐ ಹೇಳಿದೆ.
ಆಧಾರ್ ಕಾಯ್ದೆ ಪ್ರಕಾರ ಆ ರೀತಿಯ ಆಧಾರ್ ಸಂಖ್ಯೆಗಳನ್ನು ರದ್ದು ಮಾಡಲಾಗುವುದು.ಹಾಗಾಗಿ, ಹೈದರಾಬಾದ್‌ನ ಪ್ರಾದೇಶಿಕ ಕಚೇರಿಯುನೋಟಿಸ್ ಕಳಿಸಿ, ಆಧಾರ್ ಸಂಖ್ಯೆ ಪಡೆಯುವುದಕ್ಕೆಇರುವ ಸಮರ್ಥನೆಯೊಂದಿಗೆ ಖುದ್ದಾಗಿ ಹಾಜರಾಗಲು ಹೇಳಿದ್ದು.
ಆದಾಗ್ಯೂ, ಪೌರತ್ವಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಯಾವುದೇ ವ್ಯಕ್ತಿಯ ರಾಷ್ಟ್ರೀಯತೆಗೂ ಆಧಾರ್ ಸಂಖ್ಯೆ ರದ್ದತಿಗೂ ಯಾವುದೇ ಸಂಬಂಧವಿಲ್ಲ.
ಸುಳ್ಳು ದಾಖಲೆ ಅಥವಾ ಸುಳ್ಳು ನೆಪ ನೀಡಿ ಯಾರಾದರೂ ಆಧಾರ್ ಪಡೆದುಕೊಂಡಿದ್ದರೆ ಆ ಆಧಾರ್ ರದ್ದು ಮಾಡಲಾಗುವುದು ಇಲ್ಲವೇ ವಜಾ ಮಾಡಲಾಗುವುದು ಎಂದು ಯುಐಡಿಎಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.