ಭೋಪಾಲ್: ಮಧ್ಯಪ್ರದೇಶದ ಪ್ರಾಚೀನ ನಗರ ಉಜ್ಜಯಿನಿಯಲ್ಲಿನ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಅಲ್ಲಿನ ಮಹಾನಗರ ಪಾಲಿಕೆ ಆದೇಶಿಸಿದೆ.
ಈ ಆದೇಶ ಉಲ್ಲಂಘಿಸುವವರು ಮೊದಲ ಬಾರಿಗೆ ₹2,000 ದಂಡ ಪಾವತಿಸಬೇಕು. ಎರಡನೇ ಬಾರಿಯೂ ಆದೇಶ ಉಲ್ಲಂಘಿಸಿದರೆ ₹5,000 ದಂಡ ಪಾವತಿಸಬೇಕಾಗುತ್ತದೆ ಎಂದು ಉಜ್ಜಯಿನಿಯ ಮೇಯರ್ ಮುಕೇಶ್ ತತ್ವಾಲ್ ತಿಳಿಸಿದ್ದಾರೆ.
ಈ ಆದೇಶವು ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆಯೇ ಹೊರತು, ಮುಸ್ಲಿಂ ಅಂಗಡಿಗಳನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ ಎಂದು ಮೇಯರ್ ಸ್ಪಷ್ಟಪಡಿಸಿದ್ದಾರೆ.
ಉಜ್ಜಯಿನಿಯು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರೂರು. ಇಲ್ಲಿನ ಮಹಾಕಾಳ್ ದೇವಾಲಯ ಬಹಳ ಪ್ರಸಿದ್ಧಿ ಪಡೆದಿದೆ. ಸೋಮವಾರದಿಂದ ಆರಂಭವಾಗುವ ಶ್ರಾವಣ ಮಾಸದಲ್ಲಿ ವಿವಿಧೆಡೆಯಿಂದ ಅಪಾರ ಭಕ್ತರು ಇಲ್ಲಿಗೆ ಬರುತ್ತಾರೆ.
ಉತ್ತರ ಪ್ರದೇಶದಲ್ಲಿ ಕಾವಡ್ ಯಾತ್ರಾ ಮಾರ್ಗದಲ್ಲಿನ ಎಲ್ಲ ತಿನಿಸು ಅಂಗಡಿಗಳ ಮಾಲೀಕರ ಹೆಸರುಗಳನ್ನು ಪ್ರದರ್ಶಿಸುವಂತೆ ಇತ್ತೀಚೆಗೆ ನಿರ್ದೇಶಿಸಲಾಗಿತ್ತು. ಅದರ ಬೆನ್ನಲ್ಲೇ ಉಜ್ಜಯಿನಿಯಲ್ಲಿ ಇದೇ ರೀತಿಯ ಆದೇಶ ಹೊರಬಿದ್ದಿದೆ.
ಇದು ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿರುವ ಆದೇಶ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.