ಲಂಡನ್: ಬೇಹುಗಾರಿಕೆ ಪ್ರಕರಣದ ವಿಚಾರಣೆಗಾಗಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆಯನ್ನು ವಶಕ್ಕೆ ನೀಡಬೇಕು ಎನ್ನುವ ಅಮೆರಿಕದ ಮನವಿಯನ್ನು ಬ್ರಿಟನ್‌ನ ನ್ಯಾಯಾಧೀಶರೊಬ್ಬರು ತಿರಸ್ಕರಿಸಿದ್ದಾರೆ.
‘ಅವರ ಮಾನಸಿಕ ಆರೋಗ್ಯದ ಕಾರಣದಿಂದಾಗಿ ವಶಕ್ಕೆ ನೀಡುವುದು ದಬ್ಬಾಳಿಕೆ ಆಗಲಿದೆ. ಅಮೆರಿಕಕ್ಕೆ ಅಸ್ಸಾಂಜೆಯನ್ನು ಕಳುಹಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ಜಿಲ್ಲಾ ನ್ಯಾಯಾಧೀಶರಾದ ವನೀಸ್ಸಾ ಬರೈಟ್ಸರ್ ಸೋಮವಾರ ಹೇಳಿದರು. ಈ ತೀರ್ಪನ್ನು ಪ್ರಶ್ನಿಸುವುದಾಗಿ ಅಮೆರಿಕ ಸರ್ಕಾರವು ತಿಳಿಸಿದೆ.
ಅಸ್ಸಾಂಜೆ ಪರವಾಗಿ ವಾದಿಸಿದ ವಕೀಲರು, ‘ಅಸ್ಸಾಂಜೆ ಓರ್ವ ಪತ್ರಕರ್ತರಾಗಿ ತಮ್ಮ ಕಾರ್ಯನಿರ್ವಹಿಸಿದ್ದರು. ಇರಾಕ್ ಮತ್ತು ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೇನೆಯ ದುಷ್ಕೃತ್ಯವನ್ನು ಬಹಿರಂಗಪಡಿಸಿದ ಸೋರಿಕೆಯಾದ ದಾಖಲೆಗಳನ್ನು ಪ್ರಕಟಿಸುವುದಕ್ಕೆ ಅವರು ವಾಕ್‌ಸ್ವಾತಂತ್ರ್ಯದ ರಕ್ಷಣೆಗೆ ಅರ್ಹರಾಗಿದ್ದಾರೆ’ ಎಂದರು. ‘ಅವರ ಮೇಲಿನ ಆರೋಪಗಳು ಸಾಬೀತಾದರೆ, ಅವುಗಳು ವಾಕ್‌ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಅಸ್ಸಾಂಜೆ ಪರ ವಕೀಲರ ವಾದವನ್ನು ಬರೈಟ್ಸರ್ ತಿರಸ್ಕರಿಸಿದರು.
‘ಖಿನ್ನತೆಗೆ ಒಳಗಾಗಿರುವ ಅಸ್ಸಾಂಜೆ, ಅಮೆರಿಕದಲ್ಲಿನ ಜೈಲಿನಲ್ಲಿ ಪ್ರತ್ಯೇಕವಾಗಿರುವ ವೇಳೆ ಈ ಖಿನ್ನತೆ ಉಲ್ಭಣಗೊಳ್ಳುವ ಸಾಧ್ಯತೆ ಇದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಅಧಿಕಾರಿಗಳು ಕೈಗೊಳ್ಳುವ ಯಾವುದೇ ಕ್ರಮದಿಂದ ನುಣುಚಿಕೊಳ್ಳುವ ಬುದ್ಧಿಶಕ್ತಿ ಮತ್ತು ಸ್ಥಿರಸಂಕಲ್ಪ ಅವರಲ್ಲಿದೆ’ ಎಂದು ಅವರು ಹೇಳಿದರು.
ಅಸ್ಸಾಂಜೆ ವಿರುದ್ಧ ಅಮೆರಿಕದಲ್ಲಿ ದಶಕದ ಹಿಂದೆ 17 ಬೇಹುಗಾರಿಕೆ ಪ್ರಕರಣಗಳು ಹಾಗೂ ಸೋರಿಕೆಯಾದ ಸೇನಾ ಹಾಗೂ ರಾಜತಾಂತ್ರಿಕ ದಾಖಲೆಗಳನ್ನು ವಿಕಿಲೀಕ್ಸ್‌ನಲ್ಲಿ ಪ್ರಕಟಿಸಿದ ಒಂದು ಪ್ರಕರಣವಿದೆ. ಇವುಗಳಲ್ಲಿ ಅಪರಾಧ ಸಾಬೀತಾದರೆ 175 ವರ್ಷಗಳ ಜೈಲುಶಿಕ್ಷೆಯಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.