ADVERTISEMENT

ಶಾಂತಿ ಯತ್ನಕ್ಕೆ ಕೊಡುಗೆ ನೀಡಲು ಭಾರತ ಸಿದ್ಧ: ರಷ್ಯಾ ವಿದೇಶಾಂಗ ಸಚಿವರಿಗೆ ಮೋದಿ

ಪಿಟಿಐ
Published 2 ಏಪ್ರಿಲ್ 2022, 5:54 IST
Last Updated 2 ಏಪ್ರಿಲ್ 2022, 5:54 IST
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್‌
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್‌   

ನವದೆಹಲಿ: ಉಕ್ರೇನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನಗಳಿಗೆ ಯಾವುದೇ ರೀತಿಯ ಕೊಡುಗೆ ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಅವರಿಗೆ ತಿಳಿಸಿದ್ದಾರೆ.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಸರ್ಗೈ ಲಾವ್ರೊವ್ ಅವರು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರ ಜತೆ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೂ ಸುಮಾರು 40 ನಿಮಿಷ ಮಾತುಕತೆ ನಡೆಸಿದ್ದಾರೆ.

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ಭಾರತದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಾತುಕತೆ ನಡೆದಿದೆ.

ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸರ್ಗೈ ಲಾವ್ರೊವ್, ಅಂತರರಾಷ್ಟ್ರೀಯ ಸಮಸ್ಯೆಗಳ ವಿಚಾರದಲ್ಲಿ ತರ್ಕಬದ್ಧವಾದ ಮತ್ತು ನ್ಯಾಯಯುತವಾದ ನಿಲುವನ್ನು ಹೊಂದಿರುವ ಭಾರತವು ಶಾಂತಿ ಪ್ರಯತ್ನಗಳಿಗೆ ಬೆಂಬಲ ನೀಡಲಿದೆ. ಅಗತ್ಯಬಿದ್ದಲ್ಲಿ ತನ್ನ ಪಾತ್ರ ನಿಭಾಯಿಸಲಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಪರಿಸ್ಥಿತಿಗೆ ಸಂಬಂಧಿಸಿ ಲಾವ್ರೊವ್ ಅವರು ಪ್ರಧಾನಿಯವರಿಗೆ ಮಾಹಿತಿ ನೀಡಿದ್ದಾರೆ. ಶಾಂತಿ ಮಾತುಕತೆಗಳ ವಿವರವನ್ನೂ ನೀಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ (ಪಿಎಂಒ) ಪ್ರಕಟಣೆ ತಿಳಿಸಿದೆ.

ಹಿಂಸಾಚಾರವನ್ನು ನಿಲ್ಲಿಸುವಂತೆ ಈ ಹಿಂದೆ ಸಲಹೆ ನೀಡಿದ್ದ ಪ್ರಧಾನಿಯವರು ರಷ್ಯಾ ವಿದೇಶಾಂಗ ಸಚಿವ ಭೇಟಿ ವೇಳೆಯೂ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

ಪುಟಿನ್‌ ‘ವೈಯಕ್ತಿಕ ಸಂದೇಶ’ ಹೊತ್ತುಬಂದ ಲಾವ್ರೊವ್‌: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ಬಂದಿರುವ ‘ವೈಯಕ್ತಿಕ ಸಂದೇಶ’ವನ್ನು ಮೋದಿ ಅವರಿಗೆ ತಲುಪಿಸಲು ಬಯಸಿರುವುದಾಗಿ ಲಾವ್ರೊವ್‌ ಸುದ್ದಿಗಾರರಿಗೆ ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ಶುಕ್ರವಾರ ವರದಿ ಮಾಡಿದ್ದವು.

‘ಪುಟಿನ್ ಮತ್ತು ಮೋದಿ ಅವರು ಪರಸ್ಪರ ನಿರಂತರ ಸಂಪರ್ಕದಲ್ಲಿದ್ದಾರೆ. ನಾನು ನಡೆಸಿದ ಮಾತುಕತೆಗಳ ಬಗ್ಗೆ ನಮ್ಮ ಅಧ್ಯಕ್ಷರಿಗೆ ವರದಿ ಮಾಡುವೆ. ಪುಟಿನ್‌ ಅವರು ಮೋದಿಯವರಿಗೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ. ಈ ಸಂದೇಶ ತಲುಪಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಅವರನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ’ ಎಂದು ಲಾವ್ರೊವ್‌ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.