ADVERTISEMENT

ಉಕ್ರೇನ್‌ ಯುದ್ಧದಿಂದ ವಂದೇ ಭಾರತ್ ರೈಲು ಯೋಜನೆಗಳಿಗೆ ಅಡ್ಡಿ: ಕೇಂದ್ರ

ಅಜಿತ್ ಅತ್ರಾಡಿ
Published 29 ಏಪ್ರಿಲ್ 2022, 2:51 IST
Last Updated 29 ಏಪ್ರಿಲ್ 2022, 2:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉಕ್ರೇನ್ ಯುದ್ಧದಿಂದಾಗಿ ಹತ್ತಾರು ಹೊಸ ‘ವಂದೇ ಭಾರತ್ ರೈಲು’ ಯೋಜನೆಗಳಿಗೆ ಅಡ್ಡಿಯಾಗಿದೆ. ಉಕ್ರೇನ್‌ನಿಂದ ಬಿಡಿ ಭಾಗಗಳ ಆಮದಿಗೆ ಅಡಚಣೆಯಾಗಿರುವುದು ‘ವಂದೇ ಭಾರತ್ ರೈಲು’ಗಳ ನಿರ್ಮಾಣಕ್ಕೆ ತೊಡಕು ಉಂಟುಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ವಂದೇ ಭಾರತ್ ರೈಲಿನ ಕೆಲವು ಬಿಡಿ ಭಾಗಗಳು ಉಕ್ರೇನ್‌ನಲ್ಲಿ ತಯಾರಾಗುತ್ತವೆ. ಸದ್ಯದ ಸಂಘರ್ಷದ ಪರಿಸ್ಥಿತಿ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಸಮಯಕ್ಕೆ ಸರಿಯಾಗಿ ಬಿಡಿ ಭಾಗಗಳು ಪೂರೈಕೆಯಾಗುವಂತೆ ನೋಡಿಕೊಳ್ಳಲು ಆಯ್ಕೆಗಳನ್ನು ಹುಡುಕುತ್ತಿದ್ದೇವೆ. ಈ ಕುರಿತು ರೈಲ್ವೆ ಸಚಿವಾಲಯ ನಿಖರ ಮಾಹಿತಿ ನೀಡಲಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.

36,000 ಗಾಲಿಗಳನ್ನು ಪೂರೈಸುವಂತೆ ರೈಲ್ವೆ ಇಲಾಖೆಯು ಉಕ್ರೇನ್‌ ಮೂಲದ ಕಂಪನಿಗೆ ತಿಳಿಸಿತ್ತು. ಗಾಲಿಗಳು ಉಕ್ರೇನ್‌ನಿಂದ ಕಪ್ಪು ಸಮುದ್ರದ ಮೂಲಕ ಮುಂಬೈಯ ಜವಾಹರ್ ಲಾಲ್ ನೆಹರು ಬಂದರಿಗೆ ತಲುಪಬೇಕಿತ್ತು. ಯುದ್ಧದಿಂದಾಗಿ ಇದು ಸಾಧ್ಯವಾಗಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಕ್ರೇನ್ ಕಂಪನಿಯು ಈವರೆಗೆ ಕೇವಲ 128 ಗಾಲಿಗಳನ್ನು ಮಾತ್ರ ನೆರೆಯ ರುಮೇನಿಯಾಗೆ ರಸ್ತೆ ಮಾರ್ಗವಾಗಿ ಕಳುಹಿಸಿಕೊಟ್ಟಿದೆ. ಇವುಗಳನ್ನು ಅಲ್ಲಿಂದ ವಿಮಾನದ ಮೂಲಕ ಮುಂದಿನ ತಿಂಗಳು ಭಾರತಕ್ಕೆ ತರಲಾಗುವುದು. ಎರಡು ರೈಲುಗಳಿಗೆ ಪ್ರಾಯೋಗಿಕವಾಗಿ ಈ ಗಾಲಿಗಳನ್ನು ಅಳವಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯದ ಅವಶ್ಯಕತೆಯನ್ನು ಪೂರೈಸುವುದಕ್ಕಾಗಿ ಝೆಕ್ ಗಣರಾಜ್ಯ, ಪೋಲೆಂಡ್ ಹಾಗೂ ಅಮೆರಿಕದಿಂದ ಗಾಲಿಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಚೀನಾದಿಂದಲೂ ಖರೀದಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳು ನಿರ್ಮಾಣವಾಗಲಿವೆ ಎಂದು 2022ರ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. 2023ರ ಆಗಸ್ಟ್ 15ರ ವೇಳೆಗೆ 75 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುವ ಯೋಜನೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.