ನವದೆಹಲಿ: ‘ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಯುರೋಪ್ ಸೇರಿದಂತೆ ಇತರ ದೇಶಗಳು ಇಂಧನಗಳಿಗಾಗಿ ರಷ್ಯಾದ ಮೇಲೆ ಅವಲಂಭಿತವಾಗುವುದು ಸುಸ್ಥಿರವಲ್ಲ’ ಎಂದು ಐರೋಪ್ಯ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವ್ಯಾನ್ ಡರ್ ಲಿಯೇನ್ ಹೇಳಿದ್ದಾರೆ.
ಮೂರು ದಿನದ ಭಾರತ ಪ್ರವಾಸ ಕೈಗೊಂಡಿರುವ ಅವರು, ಮೊದಲ ದಿನ ಹರಿಯಾಣದ ಅಂತರರಾಷ್ಟ್ರೀಯ ಸೋಲಾರ್ ಒಕ್ಕೂಟದ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
‘ಸುಸ್ಥಿರ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ಭಾರತ ಹಾಗೂ ಐರೋಪ್ಯ ಒಕ್ಕೂಟದನಡುವೆ ಪರಸ್ಪರ ಸಹಕಾರ ಅತೀ ಅವಶ್ಯಕವಾಗಿದೆ’ ಎಂದು ಹೇಳಿದರು.
‘ನಮ್ಮ ನೆರೆಯ ದೇಶದ ಮೇಲೆ ರಷ್ಯಾ ಆಕ್ರಮಣ ಮಾಡಿ, ವಿನಾಶ ಮಾಡುತ್ತಿದೆ. ರಷ್ಯಾ ನಂಭಿಕೆಗೆ ಅರ್ಹವಲ್ಲ. ನಾವು ಪಳಿಯುಳಿಕೆ ಇಂಧನಗಳಿಗಾಗಿ ರಷ್ಯಾದ ಮೇಲೆ ಅವಲಂಭಿತವಾಗುವುದು ನಮ್ಮ ವಿನಾಶವನ್ನು ನಾವೇ ಸೃಷ್ಟಿ ಮಾಡಿಕೊಂಡಂತೆ’ ಎಂದು ಹೇಳಿದರು.
‘ನಾವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸ್ವಾವಲಂಭನೆ ಸಾಧಿಸುವುದು ಪರಿಸರ ರಕ್ಷಣೆ ವಿಷಯ ಒಂದರಲ್ಲಿ ಮಾತ್ರ ಉಪಯೋಗಕ್ಕೆ ಬರುವುದಿಲ್ಲ. ದೇಶದ ರಕ್ಷಣೆ ವಿಷಯದಲ್ಲೂ ಇದು ಪ್ರಮುಖ ಪಾತ್ರವಹಿಸಲಿದೆ’ ಎಂದು ಹೇಳಿದರು.
‘ಸೌರಶಕ್ತಿಯ ಬಗ್ಗೆ ಮುಂದಿನ ತಿಂಗಳು ಯುರೋಪಿಯನ್ ಯೂನಿಯನ್, ವಿಶೇಷ ತಂತ್ರವೊಂದನ್ನು ಜಗತ್ತಿನ ಮುಂದಿಡಲಿದೆ’ ಎಂದು ಉರ್ಸುಲಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.