ನವದೆಹಲಿ:ಮಿಲಿಟರಿ ಉಪಕರಣ ಮತ್ತು ತೈಲ ಖರೀದಿಗೆ ಸಂಬಂಧಿಸಿದ ಪಾವತಿ ವ್ಯವಸ್ಥೆ ಕುರಿತು ಚರ್ಚಿಸಲು ರಷ್ಯಾದ ವಿದೇಶಾಂಗ ಸಚಿವಸರ್ಗೈ ಲಾವ್ರೊವ್ ಅವರು ಈ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಎರಡು ದಿನಗಳ ಚೀನಾ ಭೇಟಿ ಮುಕ್ತಾಯದ ಬಳಿಕ ಲಾವ್ರೊವ್ ಅವರು ಗುರುವಾರ ಅಥವಾ ಶುಕ್ರವಾರ ಭಾರತಕ್ಕೆ ಬರುವ ಸಾಧ್ಯತೆ ಇದೆ. ಭೇಟಿ ವಿಚಾರದ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದೂ ಹೇಳಲಾಗಿದೆ.
ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಬಳಿಕ ರಷ್ಯಾದ ಉನ್ನತಮಟ್ಟದ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಲಿದೆ. ಆದಾಗ್ಯೂ ಈ ಕುರಿತು ಭಾರತ ಅಥವಾ ರಷ್ಯಾದ ವಿದೇಶಾಂಗ ಸಚಿವಾಲಯದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.
ಇದನ್ನೂ ಓದಿ:ರಷ್ಯಾ ತೈಲಕ್ಕೆ ರೂಪಾಯಿಯಲ್ಲಿ ಪಾವತಿ ಇಲ್ಲ: ಕೇಂದ್ರ
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೇರಿದಂತೆ ಯುಎಸ್ ರಾಜಕೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ವಿಕ್ಟೋರಿಯಾ ನುಲಾಂಡ್ ಮತ್ತು ಆಸ್ಟ್ರೀಯಾ ಹಾಗೂ ಗ್ರೀಸ್ ವಿದೇಶಾಂಗ ಸಚಿವರೂ ಕಳೆದ ಕೆಲವು ವಾರಗಳಿಂದ ಭಾರತಕ್ಕೆ ಭೇಟಿ ನೀಡಿದ್ದಾರೆ. ಇಂಗ್ಲೆಂಡ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರೂ ಭಾರತಕ್ಕೆ ಗುರುವಾರ ಭೇಟಿ ನೀಡಲುದಿನಾಂಕ ನಿಗದಿಯಾಗಿದೆ.
ಕಚ್ಚಾ ತೈಲ ಸಂಗ್ರಹಣೆ ಮತ್ತು ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದಂತ 'ರುಪೀ–ರುಬೆಲ್ ಪಾವತಿ ವ್ಯವಸ್ಥೆ' ಕುರಿತು ಚರ್ಚಿಸುವುದು ಲಾವ್ರೊವ್ ಭೇಟಿ ಉದ್ದೇಶ ಎನ್ನಲಾಗಿದೆ. ಉಕ್ರೇನ್ ಮೇಲಿನ ಆಕ್ರಮಣವನ್ನು ಖಂಡಿಸಿ ಅನೇಕ ರಾಷ್ಟ್ರಗಳು ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರಿರುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.