ಮುಂಬೈ: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮೂರು ದಿನಗಳ ಭೇಟಿಗಾಗಿ ಮಂಗಳವಾರ ಮಧ್ಯರಾತ್ರಿ ಭಾರತಕ್ಕೆ ಆಗಮಿಸಿದರು.
ಇಂದು ಅವರು 2008ರಲ್ಲಿ ಮುಂಬೈಯಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
ಲಂಡನ್‌ನಿಂದ ವಾಣಿಜ್ಯ ವಿಮಾನದ ಮೂಲಕ ಗುಟೆರಸ್ ಅವರು ಮುಂಬೈಗೆ ಬಂದಿಳಿದರು. ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು. ಬಳಿಕ ಅವರು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ತೆರಳಿದರು.
ಗುಟೆರಸ್ ಇಂದು ಗುಜರಾತ್‌ಗೆ ತೆರಳುವ ಮುನ್ನ ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ), 'ಭಾರತ@75: ವಿಶ್ವಸಂಸ್ಥೆ-ಭಾರತ ಪಾಲುದಾರಿಕೆ, ದಕ್ಷಿಣ-ದಕ್ಷಿಣ ಸಹಕಾರ ಬಲಪಡಿಸುವುದು' ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.
ಜನವರಿಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಆಯ್ಕೆಯಾದ ಬಳಿಕ ಗುಟೆರಸ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ 2018ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು.
ಅಕ್ಟೋಬರ್ 20ರಂದು ಅವರು ಗುಜರಾತ್‌ನ ಕೆವಾಡಿಯಾದಲ್ಲಿ 'ಮಿಷನ್ ಲೈಫ್' (ಪರಿಸರಕ್ಕಾಗಿ ಜೀವನಶೈಲಿ) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಹ ಗುಟೆರಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಜಾಗತಿಕ ಕವವಳ, ವಿಶ್ವಸಂಸ್ಥೆಯಲ್ಲಿ ಭಾರತದ ಪಾಲುದಾರಿಕೆ ಮತ್ತು ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.