ಮುಂಬೈ:18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಅಸಮ್ಮತಿಯ ಲೈಂಗಿಕ ಕ್ರಿಯೆ ನಡೆಸುವುದೂ ಅತ್ಯಾಚಾರವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜೊತೆಗೆ, ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ 10 ವರ್ಷಗಳ ಶಿಕ್ಷೆ ವಿಧಿಸಿ ಹೊರಡಿಸಿರುವ ಆದೇಶವನ್ನೂ ಅದು ಎತ್ತಿಹಿಡಿದಿದೆ.
18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಪತ್ನಿಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ 24 ವರ್ಷದ ವ್ಯಕ್ತಿಗೆ ಸೆಷನ್ ನ್ಯಾಯಾಲಯವೊಂದು ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ ಮತ್ತು ಐಪಿಸಿ ನಿಯಮಗಳ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ 2021ರಲ್ಲಿ ಆದೇಶ ಹೊರಡಿಸಿತ್ತು.
ಅಪರಾಧಿಯು ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಸಂತ್ರಸ್ತೆಯು ತನ್ನ ಪತ್ನಿಯಾಗಿರುವುದರಿಂದ ಆಕೆ ಯೊಂದಿಗಿನ ಲೈಂಗಿಕ ಸಂಬಂಧವು ಅತ್ಯಾಚಾರ ಆಗುವುದಿಲ್ಲ. ಆಕೆಯ ಒಪ್ಪಿಗೆ ಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದು ವಾದಿಸಿದ್ದ.
ಆತನ ಅರ್ಜಿಯನ್ನು ವಜಾ ಮಾಡಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ಜಿ.ಎ.ಸನಪ್ ಅವರು, ಪತ್ನಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇದ್ದಾಗ ಆಕೆಯ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
‘ಮದುವೆಯಾಗಿರಲಿ ಅಥವಾ ಆಗದೇ ಇರಲಿ; 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ. ಒಪ್ಪಿಗೆ ಇಲ್ಲದೆಯೇ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯೂ ಅತ್ಯಾಚಾರವೆ’ ಎಂದು ನ್ಯಾಯಪೀಠ ಹೇಳಿದೆ.
ತಾನು ಒಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದೆ. ಆದರೆ, ವಿರೋಧದ ನಡುವೆಯೂ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಗರ್ಭ ಧರಿಸುವಂತೆ ಮಾಡಿದ್ದ ಎಂದು ಬಾಲಕಿಯು 2019ರಲ್ಲಿ ಪೊಲೀಸರಿಗೆ ದೂರು ನೀಡಿದ್ದಳು.
ಆ ಸಂದರ್ಭದಲ್ಲಿ ಇಬ್ಬರೂ ಜೊತೆಗೆ ವಾಸಿಸುತ್ತಿದ್ದರು ಮತ್ತು ಮದುವೆಯೂ ಆಗಿದ್ದರು. ಆದರೆ, ಗರ್ಭಪಾತ ಮಾಡಿಸುವಂತೆ ಆತ ಮಹಿಳೆ ಮೇಲೆ ಒತ್ತಡ ಹಾಕಿದ್ದ.
ಮದುವೆಯನ್ನು ಪ್ರಹಸನದಂತೆ ಮಾಡಿ, ವ್ಯಕ್ತಿಯು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುವುದರ ಜೊತೆಗೆ ದೈಹಿಕವಾಗಿಯೂ ಹಲ್ಲೆ ಮಾಡಿದ್ದಾನೆ ಎಂದೂ ಆಕೆ ಆರೋಪಿಸಿದ್ದಳು.
ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿರುವುದು ಮತ್ತು ಡಿಎನ್‌ಎ ವರದಿ ಪ್ರಕಾರ, ಶಿಕ್ಷೆಗೆ ಗುರಿಯಾದ ವ್ಯಕ್ತಿ ಮತ್ತು ದೂರುದಾರ ಮಹಿಳೆಯು ಮಗುವಿನ ತಂದೆ ತಾಯಿ ಎಂಬುದು ದೃಢಪಟ್ಟಿರುವು ದನ್ನೂ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.