ಮೋತಿಹಾರಿ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಇಂದು( ಭಾನುವಾರ) ಕುಸಿದು ಬಿದ್ದಿದೆ. ಒಂದು ವಾರದೊಳಗೆ ಸಂಭವಿಸಿದ ಮೂರನೇ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋತಿಹಾರಿಯ ಘೋರಸಹನ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂವಾ ಗ್ರಾಮ ಸೇರಿದಂತೆ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆಯು ಕುಸಿದು ಬಿದ್ದಿದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇದು ಗಂಭೀರ ವಿಷಯವಾಗಿದ್ದು ಈ ಕುರಿತು ತನಿಖೆ ನಡೆಸಲಾಗುವುದು ಎಂದು ಆರ್‌ಡಬ್ಲ್ಯುಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸೇತುವೆ ಕುಸಿತದಂತಹ ಅನೇಕ ಅವಘಡಗಳು ರಾಜ್ಯದಲ್ಲಿ ಪದೇ ಪದೇ ಘಟಿಸುತ್ತಿದ್ದು, ಇದು ಅಪಾರ ಸಾವು ನೋವುಗಳಿಗೆ ಕಾರಣವಾಗದಿದ್ದರೂ, ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಹುಟ್ಟುಹಾಕಿದೆ.
ಬಿಹಾರದ ಸಿವಾನ್ ಜಿಲ್ಲೆಯ ಸಣ್ಣ ಸೇತುವೆಯೊಂದು ನಿನ್ನೆ (ಶನಿವಾರ) ಬೆಳಿಗ್ಗೆ ಕುಸಿದಿದೆ. ದುರೌಂಧಾ ಮತ್ತು ಮಹಾರಾಜಗಂಜ್ ತಾಲ್ಲೂಕುಗಳ ಕೆಲ ಹಳ್ಳಿಗಳನ್ನು ಸಂಪರ್ಕಿಸುವ ಈ ಸೇತುವೆಯನ್ನು ಕಾಲುವೆಯ ಮೇಲೆ ನಿರ್ಮಿಸಲಾಗಿತ್ತು.
ಇತ್ತೀಚೆಗಷ್ಟೇ ರಾಜ್ಯದ ಅರಾರಿಯದಲ್ಲಿ ಹೊಸ ಸೇತುವೆಯೊಂದು ಕುಸಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.