ADVERTISEMENT

ಮೋಡದ ಮರೆಯಲಿ ಮೋದಿಗೆ ಕಾಣದ 'ಕಂಕಣ ಸೂರ್ಯ'

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 6:10 IST
Last Updated 26 ಡಿಸೆಂಬರ್ 2019, 6:10 IST
ಸೂರ್ಯಗ್ರಹಣ ವೀಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಸೂರ್ಯಗ್ರಹಣ ವೀಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ    

ಬೆಂಗಳೂರು: ದೇಶದ ಹಲವು ಭಾಗಗಳಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಕಾತುರರಾಗಿದ್ದವರಿಗೆ ಮೋಡದ ಮರೆ ಬೇಸರ ತರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸೂರ್ಯಗ್ರಹಣ ಕಾಣಲು ಮೋಡಗಳು ಬಿಟ್ಟುಕೊಡಲೇ ಇಲ್ಲ.

ಡಿ.26ರಂದು ಬೆಳಿಗ್ಗೆ 8:00 ರಿಂದ 11:00ರ ವರೆಗೂ ಸಂಭವಿಸಿದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಪ್ರಧಾನಿ ಮೋದಿ ಸಹ ಉತ್ಸಾಹದಿಂದಲೇ ಸೌರ ಕನ್ನಡಕ ಹಿಡಿದು ಸಜ್ಜಾಗಿದ್ದರು. ಆದರೆ, ಮೋಡಗಳು ಖಗೋಳ ವಿಸ್ಮಯವನ್ನು ಮರೆ ಮಾಡಿಕೊಂಡವು.

'ಬಹುತೇಕ ಭಾರತೀಯರಂತೆ ನಾನೂ ಸಹ ಸೂರ್ಯಗ್ರಹಣ ವೀಕ್ಷಿಸುವ ಉತ್ಸಾಹದಲ್ಲಿದ್ದೆ. ದುರದೃಷ್ಟವಶಾತ್‌, ನನಗೆ ಸೂರ್ಯನ ದರ್ಶನ ಆಗಲಿಲ್ಲ. ಮೋಡಗಳು ಆವರಿಸಿರುವುದರಿಂದ ಗ್ರಹಣ ಕಾಣಲಿಲ್ಲ. ಆದರೆ, ಕೋಯಿಕೋಡ್‌ ಮತ್ತು ದೇಶದ ಕೆಲವುಭಾಗಗಳಲ್ಲಿ ಕಂಡ ಸೂರ್ಯಗ್ರಹಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದೆ. ತಜ್ಞರೊಂದಿಗೆ ಈ ವಿಷಯದ ಕುರಿತು ಚರ್ಚಿಸುವ ಮೂಲಕ ನನ್ನ ಜ್ಞಾನ ವೃದ್ಧಿಸಿಕೊಂಡೆ' ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

2019ರ ಕೊನೆಯ ಸೂರ್ಯಗ್ರಹಣ ದಕ್ಷಿಣ ಭಾರತದ ಹಲವು ಕಡೆ ಸ್ಪಷ್ಟವಾಗಿ ಗೋಚರಿಸಿತು. ಕಾಸರಗೋಡು ಮತ್ತು ಮಂಗಳೂರಿನಲ್ಲಿ ಕಂಕಣ ಸೂರ್ಯಗ್ರಹಣವನ್ನು ಜನರು ಕಣ್ತುಂಬಿಕೊಂಡರು.

ಚೆರವತ್ತೂರಿನಲ್ಲಿ ಸೂರ್ಯ ಬೆಂಕಿ ಉಂಗುರವಾಗಿ ಜ್ವಲಿಸಿದ. ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕರ್ನಾಟಕ, ಕೇರಳ, ತಮಿಳುನಾಡು, ಬಂಗಾಳ ಕೊಲ್ಲಿ, ಶ್ರೀಲಂಕಾದ ಉತ್ತರ ಭಾಗ, ಸೌದಿ ಅರೇಬಿಯಾ, ಕತಾರ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಒಮನ್‌, ಮಲೇಷಿಯಾ, ಇಂಡೋನೇಷಿಯಾ, ಸಿಂಗಪೂರ್‌ ಸೇರಿದಂತೆ ಹಲವು ದ್ವೀಪ ರಾಷ್ಟ್ರಗಳಲ್ಲಿ ಗ್ರಹಣ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.