ನವದೆಹಲಿ: ಕಾಂಗ್ರೆಸ್ಸಿನ ಹಿರಿಯ ನಾಯಕರು ‘ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಒಪ್ಪಲಾಗದು’ ಎಂದು ಹೇಳಿರುವುದಕ್ಕೆ ಆಕ್ಷೇಪ ದಾಖಲಿಸಿರುವ ಕೇಂದ್ರ ಚುನಾವಣಾ ಆಯೋಗವು, ಇಂತಹ ಮಾತುಗಳು ದೇಶದ ‘ಶ್ರೀಮಂತ ಪ್ರಜಾತಾಂತ್ರಿಕ ಪರಂಪರೆಯಲ್ಲಿ ಎಂದೂ ಕೇಳಿಬಂದಿರಲಿಲ್ಲ’ ಎಂದು ಹೇಳಿದೆ.
ದೇಶದ ಕಾನೂನು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಮಿತಿಯನ್ನು ಮೀರಿ ಕಾಂಗ್ರೆಸ್ ನಾಯಕರು ಈ ಮಾತು ಆಡಿದ್ದಾರೆ ಎಂದು ಆಯೋಗವು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಪತ್ರ ಬರೆದಿರುವ ಚುನಾವಣಾ ಆಯೋಗವು, ಪಕ್ಷದ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರು ಆಡಿರುವ ಈ ಮಾತುಗಳು, ಶಾಸನಬದ್ಧವಾದ ಚುನಾವಣಾ ಚೌಕಟ್ಟಿನ ಮೂಲಕ ‘ಜನರು ನೀಡಿರುವ ತೀರ್ಮಾನವನ್ನು ಅಪ್ರಜಾಸತ್ತಾತ್ಮಕವಾಗಿ ತಿರಸ್ಕರಿಸುವುದರತ್ತ’ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಹರಿಯಾಣ ಚುನಾವಣಾ ಫಲಿತಾಂಶವು ಅನಿರೀಕ್ಷಿತ ಎಂದು ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಹೇಳಿರುವುದನ್ನು, ಪಕ್ಷವು ಫಲಿತಾಂಶವನ್ನು ವಿಶ್ಲೇಷಿಸಲಿದೆ ಎಂದಿರುವುದನ್ನು ಮತ್ತು ದೂರುಗಳನ್ನು ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ಹೇಳಿರುವುದನ್ನು ಗಮನಿಸಲಾಗಿದೆ ಎಂದು ಆಯೋಗವು ಪತ್ರದಲ್ಲಿ ತಿಳಿಸಿದೆ.
ಕಾಂಗ್ರೆಸ್ ನಿಯೋಗದಿಂದ ದೂರು:
ಹರಿಯಾಣದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಕೆಲವು ಇವಿಎಂಗಳಲ್ಲಿ ಕಂಡುಬಂದ ವ್ಯತ್ಯಾಸಗಳ ಬಗ್ಗೆ ವಿಸ್ತೃತವಾದ ತನಿಖೆ ಆಗಬೇಕು ಎಂದು ಕಾಂಗ್ರೆಸ್ ನಾಯಕರ ನಿಯೋಗವು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ತನಿಖೆ ಮುಗಿಯುವವರೆಗೆ ಅಂತಹ ಇವಿಎಂಗಳನ್ನು ಸುರಕ್ಷಿತವಾಗಿ ಇರಿಸಬೇಕು ಎಂದು ಅದು ಕೋರಿದೆ.
ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ಅಶೋಕ್ ಗೆಹಲೋತ್, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಅಜಯ್ ಮಾಕನ್, ಪವನ್ ಖೇರಾ ಮತ್ತಿತರರು ಇದ್ದ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿತು.
ಹರಿಯಾಣದ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ನಿರ್ದಿಷ್ಟ ದೂರುಗಳನ್ನು ನಿಯೋಗವು ಆಯೋಗದ ಅಧಿಕಾರಿಗಳಿಗೆ ಸಲ್ಲಿಸಿತು.
ಮತ ಎಣಿಕೆಯ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಇವಿಎಂಗಳಲ್ಲಿ ಶೇಕಡ 99ರಷ್ಟು ಬ್ಯಾಟರಿ ಇತ್ತು. ಆದರೆ ಇನ್ನುಳಿದ ಇವಿಎಂಗಳಲ್ಲಿ ಬ್ಯಾಟರಿ ಪ್ರಮಾಣವು ಶೇ 60ರಿಂದ ಶೇ 70ರಷ್ಟು ಇತ್ತು ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ. ಕಾಂಗ್ರೆಸ್ ನಾಯಕರು ಏಳು ಲಿಖಿತ ರೂಪದ ದೂರುಗಳು ಸೇರಿದಂತೆ ಒಟ್ಟು 20 ದೂರುಗಳನ್ನು ನೀಡಿದ್ದಾರೆ.
‘ಹರಿಯಾಣದ ಫಲಿತಾಂಶ ಆಶ್ಚರ್ಯ ಮೂಡಿಸುವಂತಿದೆ. ಹೀಗಾಗಿ ಮತ ಎಣಿಕೆ ವಿಚಾರದಲ್ಲಿ ಅನುಮಾನಗಳಿವೆ. ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದು ಎಲ್ಲರೂ ನಂಬಿದ್ದರು. ಅಂಚೆ ಮತಗಳ ಎಣಿಕೆ ನಡೆದಾಗ ಕಾಂಗ್ರೆಸ್ ಮುಂದಿತ್ತು. ಆದರೆ, ಇವಿಎಂಗಳಲ್ಲಿ ದಾಖಲಾದ ಮತಗಳ ಎಣಿಕೆ ಶುರುವಾದಾಗ, ಫಲಿತಾಂಶ ವಿರುದ್ಧ ದಿಕ್ಕಿಗೆ ಸಾಗಿತು’ ಎಂದು ಹೂಡಾ ಅವರು ಸುದ್ದಿಗಾರರ ಬಳಿ ಹೇಳಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ ಕೆಲವು ದೂರುಗಳನ್ನು ಆಯೋಗಕ್ಕೆ ಸಲ್ಲಿಸಲಿದೆ ಎಂದು ಅವರು ತಿಳಿಸಿದರು. ‘ದೂರುಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ಆಯೋಗವು ಭರವಸೆ ನೀಡಿದೆ’ ಎಂದು ಅವರು ಹೇಳಿದರು.
ದೂರುಗಳ ವಿಚಾರವಾಗಿ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಆಯೋಗ ತಿಳಿಸಿದೆ ಎಂದು ಪವನ್ ಖೇರಾ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.