ನವದೆಹಲಿ: ಮಕ್ಕಳ ದಿನಾಚರಣೆ ನಿಮಿತ್ತ ಯುನಿಸೆಫ್ ಇಂಡಿಯಾ ಭಾನುವಾರ ಇಲ್ಲಿ ಸಾಂಕೇತಿಕವಾಗಿ ‘ಕೋವಿಡ್ ಹಿನ್ನೆಲೆಯ ತರಗತಿ ಕೋಣೆ’ಯ ಮಾದರಿ ಅನಾವರಣಗೊಳಿಸಿತು. ‘ಮಕ್ಕಳ ಸುರಕ್ಷಿತ ಕಲಿಕೆಗೆ ಒತ್ತು ನೀಡಬೇಕು’ ಎಂದು ಸಲಹೆ ಮಾಡಿತು.
ಖಾಲಿ ಮೇಜುಗಳು, ಕುರ್ಚಿಗಳು, ಹಿನ್ನೆಲೆಯಲ್ಲಿ ಬಳಸದೇ ಇರುವ ಸ್ಥಿತಿಯಲ್ಲಿದ್ದ ಮಕ್ಕಳ ಪುಸ್ತಕದ ಚೀಲಗಳು ಈ ತರಗತಿ ಕೋಣೆಯಲ್ಲಿ ಇದ್ದವು. ಕೋವಿಡ್ ಅವಧಿಯಲ್ಲಿ ತರಗತಿ ಕಲಿಕೆಯಿಂದ ವಂಚಿತರಾದ ಅಸಂಖ್ಯ ಮಕ್ಕಳ ಸ್ಥಿತಿಯನ್ನು ಬಿಂಬಿಸುವುದು ಇದರ ಉದ್ದೇಶವಾಗಿತ್ತು.
ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಂದು ವರ್ಷಕ್ಕೂ ಅಧಿಕ ಕಾಲ ಶಾಲೆಗಳನ್ನು ಬಂದ್ ಮಾಡಲಾಗಿದ್ದು, ಇದರಿಂದ ಮಕ್ಕಳ ಕಲಿಕೆಯ ಪ್ರಗತಿಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿತ್ತು.
ಶಾಲೆಯ ಬೆಲ್ ರಿಂಗಣಿಸುವ ಮೂಲಕ ಯುನಿಸೆಫ್ ಇಂಡಿಯಾ ಪ್ರತಿನಿಧಿ ಯಸುಮಾಸ ಕಿಮುರಾ ಅವರು ಶಾಲಾ ಕೊಠಡಿಯನ್ನು ಅನಾವರಣಗೊಳಿಸಿದರು. ನ. 20ರಂದು ವಿಶ್ವ ಮಕ್ಕಳ ದಿನ ಇದ್ದು, ಆ ಹಿನ್ನೆಲೆಯಲ್ಲಿಯೂ ಕೊಠಡಿಯನ್ನು ಸ್ಥಾಪಿಸಲಾಗಿದೆ.
‘ಕೋವಿಡ್‌ನಿಂದ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿದೆ. ಹಲವು ಮಕ್ಕಳು ಓದುವುದು, ಬರೆಯುವುದನ್ನು ಮರೆತುಬಿಟ್ಟಿದ್ದಾರೆ’ ಎಂದು ಕಿಮುರಾ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.