ದಾಮೋಹ್: ಮಧ್ಯಪ್ರದೇಶದ ದಾವೋಹ್ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ದಂಪತಿ ಮೇಲೆ ಹಲ್ಲೆ ಮಾಡಿ ಎರಡೂವರೆ ತಿಂಗಳ ಹಸುಳೆಯನ್ನು ಕೊಲೆ ಮಾಡಿದ್ದಾನೆ. ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಉಸ್ತುವಾರಿ ಮಹೇಶ್ ಕೋರಿ ಹೇಳಿದ್ದಾರೆ.
ದೂರುದಾರ ಲೆಖ್ರಮ್ ಆದಿವಾಸಿ ಎಂಬವರು ಪತ್ನಿ ಹಾಗೂ ಮಗುವಿನೊಂದಿಗೆ ಗೊಂದ್‌ವಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಯಿಂದ ಬಂದಿದ್ದರು. ಮಾಡಿಯಾದೋಹ್ ಗ್ರಾಮಕ್ಕೆ ತೆರಳಬೇಕಿದ್ದ ಅವರು, ಮಗು ಕಾಯಿಲೆ ಬಿದ್ದಿದ್ದರಿಂದ ದಾಮೋಹ್ ನಿಲ್ದಾಣದಲ್ಲಿ ಇಳಿದು ಜಿಲ್ಲಾ ಆಸ್ಪತ್ರೆಗೆ ತೆರಳಬೇಕೆಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಖ್ರಮ್ ಅವರ ಪತ್ನಿ ಮಗುವಿಗೆ ನೀರು ಕುಡಿಸುತ್ತಿದ್ದ ವೇಳೆ ಬಂದ ಆಗಂತುಕನೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಲೆಖ್ರಮ್ ಅಲ್ಲಿಯೇ ಬಿದ್ದಿದ್ದ ಇಟ್ಟಿಗೆ ತುಂಡನ್ನು ಎತ್ತಿ ಅವನನ್ನು ಓಡಿಸಿದ್ದಾನೆ. ಆಗಂತುಕನ ದಾಳಿಯಲ್ಲಿ ಮಗು ಸಾವಿಗೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವೇಳೆ ಸರ್ಕಾರಿ ರೈಲ್ವೆ ಪೊಲೀಸರು ತನ್ನ ರಕ್ಷಣೆಗೆ ಬಂದಿಲ್ಲ ಎಂದು ಆರೋಪಿಸಿರುವ ದೂರುದಾರ, ಕೊನೆಗೆ ಪೊಲೀಸ್ ಸಹಾಯವಾಣಿಗೆ ಕರೆಮಾಡಬೇಕಾಯಿತು ಎಂದು ಹೇಳಿದ್ದಾರೆ.
ಆರೋಪಿಯ ಪತ್ತೆಗೆ ಶೋಧ ಆರಂಭಿಸಲಾಗಿದ್ದು, ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.