ADVERTISEMENT

ಯುಸಿಸಿ: ಶೀಘ್ರ ಕಾನೂನು ಆಯೋಗದ ಮೊರೆ 

ಮುಸ್ಲಿಂ ಕಾನೂನು ಮಂಡಳಿಯ ತುರ್ತು ಸಭೆ: 100 ಪುಟ ಅಭಿಪ್ರಾಯ ಮಂಡನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 17:05 IST
Last Updated 28 ಜೂನ್ 2023, 17:05 IST

ಲಖನೌ: ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆಯ(ಯುಸಿಸಿ) ಜಾರಿಗೆ ಒಲವು ತೋರಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ಮಂಗಳವಾರ ಹೊರಬಿದ್ದ ಬೆನ್ನಲ್ಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ತಡರಾತ್ರಿ ತುರ್ತುಸಭೆ ನಡೆಸಿ ಈ ಕುರಿತು ಚರ್ಚಿಸಿತು.

ಮಂಡಳಿಯ ಅಧ್ಯಕ್ಷ ಮೌಲಾನ ಸೈಫುಲ್ಲಾ ರೆಹಮಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ  ವರ್ಚುವಲ್‌ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಯುಸಿಸಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬಳಿಕ ಈ ಬಗ್ಗೆ ಶೀಘ್ರವೇ ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದರು.

‘ನಾಗರಿಕ ಸಂಹಿತೆಯು ಸಾಂವಿಧಾನಿಕ ಆಶಯಕ್ಕೆ ವಿರುದ್ಧವಾದುದು. ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದು ಅಧ್ಯಕ್ಷ ಸೈಫುಲ್ಲಾ ರೆಹಮಾನಿ ದೂರಿದರು.

ADVERTISEMENT

‘ಇದರ ಜಾರಿಯನ್ನು ಮಂಡಳಿ ವಿರೋಧಿಸಲಿದೆ. ಜುಲೈ 14ರೊಳಗೆ ಕಾನೂನು ಆಯೋಗಕ್ಕೆ ತನ್ನ ಅಭಿಪ್ರಾಯ ತಿಳಿಸಲಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಧರ್ಮಗುರು ಮೌಲಾನ ಖಾಲೀದ್ ರಶೀದ್‌ ಫಿರಂಗಮಹಾಲಿ ತಿಳಿಸಿದರು.

‘ಯುಸಿಸಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಪ್ರಸಿದ್ಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮಂಡಳಿಯು ಕರಡು ಸಿದ್ಧಪಡಿಸಲು ಮುಂದಾಗಿದೆ. ಸುಮಾರು 100 ಪುಟಗಳಷ್ಟು ಅಭಿಪ್ರಾಯವನ್ನು ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಿದೆ. ಇದರ ಜಾರಿಯಿಂದ ದೇಶದ ಒಗ್ಗಟ್ಟು, ಸಮಗ್ರತೆ ಮತ್ತು ಜನತಂತ್ರ ವ್ಯವಸ್ಥೆ ಮೇಲೆ ಆಗುವ ಸಂಭವನೀಯ ದುಷ್ಪರಿಣಾಮಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮೊಹಮ್ಮದ್ ಫಜಲ್‌ ಉರ್ ರಹೀಂ, ಡಾ.ಖ್ವಾಸಿಂ ರಸೂಲ್‌ ಇಲಿಯಾಸ್‌ ಸೇರಿದಂತೆ ಹಲವು ಹಿರಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಒಮ್ಮತದ ಜಾರಿಗೆ ಎಎಪಿ ಬೆಂಬಲ(ನವದೆಹಲಿ/ ಪಿಟಿಐ ವರದಿ): ‘ನಾಗರಿಕ ಸಂಹಿತೆ ಜಾರಿಗೂ ಮೊದಲು ಕೇಂದ್ರ ಸರ್ಕಾರವು ಎಲ್ಲರೊಂದಿಗೂ ಸಮಾಲೋಚನೆ ನಡೆಸಿ ಒಮ್ಮತದಿಂದ ಇದನ್ನು ಜಾರಿಗೊಳಿಸಬೇಕಿದೆ ಎಂದು ಎಎಪಿ ಹೇಳಿದೆ.

ಸಂಹಿತೆ ಜಾರಿಗೂ ಮೊದಲು ಇದನ್ನು ಬೆಂಬಲಿಸುವವರು, ಸರ್ವಪಕ್ಷಗಳು ಮತ್ತು ಸಂಘ–ಸಂಸ್ಥೆಗಳ ನಡುವೆ ಚರ್ಚಿಸಬೇಕು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್‌ ಪಾಠಕ್ ಹೇಳಿದ್ದಾರೆ.

‘ಯುಸಿಸಿ ಎಂಬುದು ಸಾಂವಿಧಾನಿಕ ಆದರ್ಶ. ಸರ್ಕಾರ ಇದನ್ನು ಜಾರಿಗೊಳಿಸಬಹುದು ಎಂದು ಸಂವಿಧಾನದ 44ನೇ ವಿಧಿ ಕೂಡ ಹೇಳುತ್ತದೆ. ಹಾಗಾಗಿ, ಇದಕ್ಕೆ ಪಕ್ಷ ಬೆಂಬಲ ನೀಡುತ್ತದೆ. ಆದರೆ, ಇಂತಹ ವಿಷಯಗಳ ಜಾರಿಯಲ್ಲಿ ಒಮ್ಮತ ಅಗತ್ಯ. ಎಲ್ಲರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಜಾರಿಗೊಳಿಸುವುದು ಉತ್ತಮ’ ಎಂದಿದ್ದಾರೆ.

ಯುಸಿಸಿ ಹೇರಿಕೆ ವ್ಯರ್ಥ ಕಸರತ್ತು: ಚಿದಂಬರಂ

‘ಭಾರತೀಯ ಕೌಟುಂಬಿಕ ಪದ್ಧತಿಯಲ್ಲಿ ವೈವಿಧ್ಯ ಇದೆ. ಜನರಲ್ಲಿರುವ ವೈವಿಧ್ಯ ಮತ್ತು ಬಹುತ್ವವನ್ನು ಸಂವಿಧಾನವೂ ಗುರುತಿಸಿದೆ. ಹೀಗಿದ್ದರೂ ಕಾರ್ಯಸೂಚಿ ಹೊಂದಿರುವ ಬಹುಮತದ ಸರ್ಕಾರವು ಜನರ ಮೇಲೆ ಬಲವಂತವಾಗಿ ಯುಸಿಸಿ ಹೇರಲು ಸಾಧ್ಯವಿಲ್ಲ’

–ಹೀಗೆಂದು ಯುಸಿಸಿ ಜಾರಿಗೆ ಇಂಗಿತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ತಿರುಗೇಟು ನೀಡಿದ್ದಾರೆ.

‘ನಾಗರಿಕ ಸಂಹಿತೆ ಜಾರಿಗಾಗಿ ಮೋದಿ ಅವರು ಇಡೀ ರಾಷ್ಟ್ರವನ್ನು ಕುಟುಂಬಕ್ಕೆ ಹೋಲಿಸಿದ್ದಾರೆ. ಅವರ ಈ ಸಮೀಕರಣವು ಮೊದಲ ನೋಟಕ್ಕೆ ಸತ್ಯವಾಗಿ ಕಾಣಬಹುದು. ಆದರೆ, ವಾಸ್ತವ ಸ್ಥಿತಿ ತುಂಬಾ ಭಿನ್ನವಾಗಿದೆ. ಕುಟುಂಬವು ರಕ್ತಸಂಬಂಧದ ಆಗರ. ರಾಷ್ಟ್ರದ ಒಗ್ಗೂಡುವಿಕೆಯು ಇದಕ್ಕೆ ತದ್ವಿರುದ್ಧವಾಗಿದೆ. ರಾಜಕೀಯ ಮತ್ತು ಕಾನೂನಿನ ಚೌಕಟ್ಟಿನಡಿ ದೇಶ ಒಗ್ಗೂಡಿದೆ. ಹಾಗಾಗಿ, ಇವೆರಡರ ನಡುವಣ ಹೋಲಿಕೆಯೇ ಸರಿಯಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಸಂಹಿತೆ ಜಾರಿಯನ್ನು ಸರಳ ಕಸರತ್ತು ಎಂಬಂತೆ ಮೋದಿ ಚಿತ್ರಿಸುತ್ತಿದ್ದಾರೆ. ಭಾರತದ ಈಗಿನ ಸಂದರ್ಭದಲ್ಲಿ ಇದರ ಜಾರಿ ಕಾರ್ಯಸಾಧುವಲ್ಲ ಎಂದು ಕಾನೂನು ಆಯೋಗವೇ ಪ್ರತಿಪಾದಿಸಿದೆ. ಆ ವರದಿಯನ್ನು ಒಮ್ಮೆ ಪ್ರಧಾನಿ ಅವರು ಓದಬೇಕಿದೆ ಎಂದು ಸಲಹೆ ನೀಡಿದ್ದಾರೆ.

ದೇಶದಲ್ಲಿ ಹಣದುಬ್ಬರ, ನಿರುದ್ಯೋಗ, ದ್ವೇಷ ಭಾಷಣ, ತಾರತಮ್ಯ ತಾಂಡವವಾಗುತ್ತಿದೆ. ಈ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ತಂತ್ರಗಾರಿಕೆ ಹೆಣೆದಿದ್ದಾರೆ. ಆದರೆ, ಜನರು ಕೂಡ ಜಾಗರೂಕರಾಗಿದ್ದಾರೆ ಎಂದಿದ್ದಾರೆ.

ದೇಶದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಬಿಜೆಪಿ ಸೋತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಮತಗಳ ಧ್ರುವೀಕರಣಕ್ಕಾಗಿ ಈ ತಂತ್ರ ಹೆಣೆಯುತ್ತಿದೆ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.