ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡು ಸಿದ್ಧಪಡಿಸಲಿಕ್ಕಾಗಿ
ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯು, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
ಅವರಿಗೆ ಶುಕ್ರವಾರ ಕರಡು ಪ್ರತಿಯನ್ನು ಸಲ್ಲಿಸಿತು.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯು ಈ ಕರಡನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಿತು.
‘2022ರ ವಿಧಾನಸಭೆ ಚುನಾವಣೆ ಸಂದರ್ಭ ರಾಜ್ಯದ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವ ಕಡೆಗೆ ಮತ್ತೊಂದು ಹೆಜ್ಜೆಯಿಟ್ಟಂತಾಗಿದೆ. ಬಹು ಕಾಲದಿಂದಲೂ ಕಾದಿದ್ದ ಸಮಯ ಇದೀಗ ಬಂದಿದೆ. ವಿಧಾನಸಭೆಯಲ್ಲಿ ಮಂಡಿಸುವ ಮೊದಲು ಪರಿಶೀಲಿಸುತ್ತೇವೆ. ಅಧ್ಯಯನ ಮಾಡುತ್ತೇವೆ ಮತ್ತು ಚರ್ಚಿಸುತ್ತೇವೆ’ ಎಂದು ಕರಡು ಪತ್ರಿ ಸ್ವೀಕರಿಸಿದ ಕೆಲ ಹೊತ್ತಿನಲ್ಲೇ ಧಾಮಿ ಹೇಳಿದರು.
ಕರಡು ಕುರಿತಂತೆ ಚರ್ಚಿಸಲು ಶನಿವಾರ ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದೆ.
ವಿಶೇಷ ಅಧಿವೇಶನ: ಯುಸಿಸಿಯ ಕರಡು ಕುರಿತು ಚರ್ಚಿಸಲು ವಿಧಾನ ಸಭೆಯ ವಿಶೇಷ ಅಧಿವೇಶನವನ್ನು ಸೋಮವಾರದಿಂದ ನಡೆಸಲಾಗುವುದು ಎಂದು ಧಾಮಿ ತಿಳಿಸಿದರು.
‘ಸಮಿತಿಯು ನಾಲ್ಕು ಸಂಪುಟಗಳಲ್ಲಿ ಯುಸಿಸಿಯ ಕರಡು ಜೊತೆಗೆ ಸುಮಾರು 749 ಪುಟಗಳ ವರದಿಯನ್ನು ಸಲ್ಲಿಸಿದೆ. ಇದನ್ನು ಫೆ. 6ರಂದು ವಿಧಾನಸಭೆಯಲ್ಲಿ ಚರ್ಚೆಗೆ ಮಂಡಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.