ನವದೆಹಲಿ: ಬಿಜೆಪಿ ಆಳ್ವಿಕೆ ಇರುವ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೆಲವು ಸಚಿವರು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಬಿಜೆಪಿಯ ಪ್ರಧಾನ ಮೂರು ಭರವಸೆ
ಗಳಲ್ಲಿ ಒಂದಾಗಿರುವ ಯುಸಿಸಿಯ ಜಾರಿಯ ಬಗ್ಗೆ ಕೇಂದ್ರ ಸರ್ಕಾರವು ಗಂಭೀರವಾಗಿದೆ ಎಂಬ ಸೂಚನೆಯನ್ನು ಈ ಹೇಳಿಕೆಗಳು ನೀಡುತ್ತಿವೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಸುಪ್ರೀಂ ಕೋರ್ಟ್ ತೀರ್ಪು ಮೂಲಕ ಸಾಧ್ಯವಾಗಿದೆ. ಜಮ್ಮುಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನ ಮಾನವನ್ನು ರದ್ದುಪಡಿಸಲಾಗಿದೆ. ಬಿಜೆಪಿಯ ಮೂರನೇ ಮುಖ್ಯ ಭರವಸೆ ಯುಸಿಸಿ. 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಇದುವೇ ಬಿಜೆಪಿಯ ಮುಖ್ಯ ಅಸ್ತ್ರ ಆಗಬಹುದು ಎನ್ನಲಾಗುತ್ತಿದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಕೆಲಸಮಯದಲ್ಲಿ ಚುನಾವಣೆ ಎದುರಿಸ
ಬೇಕಿದೆ. ಯುಸಿಸಿ ಉತ್ತಮವಾದ ಪರಿಕಲ್ಪನೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಯುಸಿಸಿ ಜಾರಿ ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅಲ್ಲಿನ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯಹೇಳಿದ್ದಾರೆ. ಉತ್ತರಾಖಂಡದಲ್ಲಿಯುಸಿಸಿ ಜಾರಿಯಾದರೆ, ಇತರ ರಾಜ್ಯಗಳು ಕೂಡ ಅದನ್ನು ಅನುಸರಿಸಲಿವೆ ಎಂದು ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕಕಾನೂನು ಮಂಡಳಿಯು ಯುಸಿಸಿಯನ್ನು ವಿರೋಧಿಸುತ್ತಿದೆ. ಆದರೆ, ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉತ್ತರ ಪ್ರದೇಶದ ಏಕೈಕ
ಮುಸ್ಲಿಂ ಸಚಿವ ಡ್ಯಾನಿಷ್ ಆಜಾದ್ ಅನ್ಸಾರಿ ಅವರು ಯುಸಿಸಿಯ ಅನುಕೂಲ
ಗಳ ಬಗ್ಗೆ ಮುಸ್ಲಿಮರಿಗೆ ಮನವರಿಕೆ ಮಾಡಿ ಕೊಡಲು ಸಭೆಗಳನ್ನು ನಡೆಸಬೇಕು ಎಂದಿದ್ದಾರೆ.
ರಾಮ ಮಂದಿರವು ಭಾವನಾತ್ಮಕ ವಿಷಯವಾಗಿಯೇ ಸದಾ ಇರುತ್ತದೆ. ಆದರೆ, ಮಂದಿರದ ಹೆಸರಿನಲ್ಲಿ ಮತ ಪಡೆಯಲು ಈಗ ಸಾಧ್ಯವಿಲ್ಲ. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯು ಜನರ ಮನಸ್ಸಿನಿಂದ ಮರೆಯಾಗಿದೆ. ಹಾಗಾಗಿ, ಯುಸಿಸಿಯನ್ನು ಪ್ರಗತಿಪರ ಎಂದು ಬಿಂಬಿಸಿಕೊಂಡು, ಅದನ್ನೇ ಧ್ರುವೀಕರಣದ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಅವಕಾಶ ಬಿಜೆಪಿಗೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
‘ಸಿಎಎ, ರಾಮ ಮಂದಿರ, ವಿಶೇಷಾಧಿಕಾರ ರದ್ದತಿ, ತ್ರಿವಳಿ ತಲಾಖ್ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಈಗ ನಮ್ಮ ಮುಂದೆ ಇರುವುದು ಯುಸಿಸಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.