ನವದೆಹಲಿ: ದೆಹಲಿ ಚಲೋ ಪ್ರತಿಭಟನೆಯನ್ನು ಪುನರಾರಂಭಿಸಿರುವ ರೈತರು ದೆಹಲಿಯತ್ತ ಮುಖ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ರೈತ ಮುಖಂಡರೊಂದಿಗೆ 5 ನೇ ಸುತ್ತಿನ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಂಡಾ, ‘5ನೇ ಸುತ್ತಿನ ಮಾತುಕತೆ ನಡೆಸಲು ರೈತ ಮುಖಂಡರನ್ನು ಆಹ್ವಾನಿಸುತ್ತಿದ್ಧೇವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ತ್ಯಾಜ್ಯ, ಎಫ್‌ಐಆರ್ ಮತ್ತು ಬೆಳೆ ವೈವಿಧ್ಯೀಕರಣದಂತಹ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ಶಾಂತಿ ಕಾಪಾಡುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ನಾವು ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕು’ ಎಂದಿದ್ದಾರೆ.
ಅಶ್ರುವಾಯು ಸಿಡಿಸಿದ ಪೊಲೀಸರು
ಕೆಲವು ರೈತರು ಬುಧವಾರ ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳತ್ತ ನುಗ್ಗುತ್ತಿರುವುದನ್ನು ತಡೆಯಲು ಭದ್ರತಾ ಪಡೆ ಅಧಿಕಾರಿಗಳು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದಾಗಿ ನೂರಾರು ರೈತರು ದಿಕ್ಕಾಪಾಲಾದರು.
ಸರ್ಕಾರದ ಪ್ರಸ್ತಾವ ತಿರಸ್ಕರಿಸಿದ ಬಳಿಕ ದೆಹಲಿಯತ್ತ ಸಾಗಲು ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ಸಾವಿರಾರು ರೈತರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.