ಕೇಂದ್ರದಲ್ಲಿ ರಚನೆಯಾಗಿರುವ ನೂತನ ಬಿಜೆಪಿ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ (ಜುಲೈ 5) ಚೊಚ್ಚಿಲ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇದಕ್ಕೂ ಹಿಂದೆ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿತ್ತಾದರೂ, ಅದು ಚುನಾವಣಾ ಉದ್ದೇಶಕ್ಕಾಗಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್ ಮಾತ್ರ ಆಗಿತ್ತು. ಹಾಗಾಗಿ ಇನ್ನುಳಿದಿರುವ ಹಣಕಾಸು ವರ್ಷಕ್ಕಾಗಿ ಇದೇ ಶುಕ್ರವಾರ ಬಜೆಟ್ ಮಂಡಿಸಲಾಗುತ್ತಿದೆ.
ಕೇಂದ್ರ ಬಜೆಟ್ ಅಂದರೆ ಏನು?
ಆದಾಯ, ವ್ಯಯ, ಕೊರತೆ, ಸಾಲದ ಕುರಿತಾದ ಸರ್ಕಾರದ ಹಣಕಾಸಿಗೆ ಸಂಬಂಧಿಸಿದ ಸಮಗ್ರ ದಾಖಲೆಯೇ ಬಜೆಟ್. ಸಮಾಜದ ವಿವಿಧ ವಿಭಾಗಗಳ ಅಗತ್ಯಗಳನ್ನು ಪೂರೈಸಲು, ಹಣಕಾಸು ಒದಗಿಸಲು ಸರ್ಕಾರ ಹಾಕಿಕೊಂಡ ಯೋಜನೆ ಏನು? ಇದಕ್ಕೆ ಬೇಕಾದ ಸಂಪನ್ಮೂಲವನ್ನು, ಆದಾಯವನ್ನು ಹೇಗೆ ಹೊಂದಿಸಲಾಗುತ್ತದೆ ಎಂದು ಈ ದಾಖಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಸಂವಿಧಾನದ ವಿಧಿ 112ರ ಪ್ರಕಾರ ಯಾವುದೇ ಸರ್ಕಾರ ಪ್ರತಿ ಹಣಕಾಸು ವರ್ಷದ ಆರಂಭಕ್ಕೂ ಮುನ್ನ ಬಜೆಟ್ ಮಂಡಿಸಬೇಸುವುದು ಅಗತ್ಯ ಮತ್ತು ಕಡ್ಡಾಯ.
ಬಜೆಟ್ ಏಕೆ ಮುಖ್ಯ?
ಸಾಮಾಜಿಕ ನ್ಯಾಯ ಕಲ್ಪಿಸುವ ಸಲುವಾಗಿ ಮತ್ತು ಆರ್ಥಿಕ ಅಸಮಾನತೆಗಳನ್ನು ನೀಗಿಸುವ ಉದ್ದೇಶದಿಂದ ಸಂಪನ್ಮೂಲವನ್ನು ಬಜೆಟ್‌ನ ಮೂಲಕ ಮರುಹಂಚಿಕೆ ಮಾಡುವುದು ಸರ್ಕಾರಗಳ ಮೂಲ ಉದ್ದೇಶ. ಸ್ಪರ್ಧಾತ್ಮಕ ಯುಗದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಬಜೆಟ್ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಬಜೆಟ್‌ನಲ್ಲಿನ ಕಾರ್ಯಕ್ರಮಗಳ ಮೂಲಕ ಸರ್ಕಾರಗಳು ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ, ಕಲ್ಯಾಣ ಕಾರ್ಯಕ್ರಮಗಳು, ಭದ್ರತೆಯನ್ನು ಸಾಧಿಸಲು ಪ್ರಯತ್ನಿಸುತ್ತವೆ. ಲಭ್ಯವಿರುವ ಸಂಪನ್ಮೂಲವನ್ನು ನ್ಯಾಯಬದ್ಧವಾಗಿ ಬಳಸಲು ಏನೆಲ್ಲ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿದೆ ಎಂಬುದನ್ನು ಬಜೆಟ್ ದಾಖಲೆಗಳು ಪ್ರತಿಧ್ವನಿಸುತ್ತವೆ.
ಸಂಪನ್ಮೂಲವನ್ನು ಪ್ರತಿ ವರ್ಷ ಸರ್ಕಾರಹೇಗೆ ಸಂಗ್ರಹಿಸುತ್ತೆ?
ಸಂಪನ್ಮೂಲವನ್ನು ಸರ್ಕಾರಗಳು ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುತ್ತವೆ. ತೆರಿಗೆಯಲ್ಲೂ ಎರಡು ಬಗೆಗಳಿವೆ. ಒಂದು ನೇರ ತೆರಿಗೆಯಾದರೆ ಮತ್ತೊಂದು ಪರೋಕ್ಷ ತೆರಿಗೆ. ನೇರ ತೆರಿಗೆಯಲ್ಲಿ ಕಾರ್ಪೊರೇಟ್ ತೆರಿಗೆ, ವೈಯಕ್ತಿಕ ತೆರಿಗೆ, ಬಂಡವಾಳ ಗಳಿಕೆ, ಆಸ್ತಿ ತೆರಿಗೆಗಳು ಒಳಪಡುತ್ತವೆ. ಪರೋಕ್ಷ ತೆರಿಗೆ ವಿಭಾಗದಲ್ಲಿ ಸುಂಕ, ಅಬಕಾರಿ, ಸರುಕು ಮತ್ತು ಸೇವಾ ತೆರಿಗೆಗಳು ಒಳಪಡುತ್ತವೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಯಾವತ್ತೂ ಸರ್ಕಾರಗಳಿಗೆ ಆದಾಯ ತಂದುಕೊಡುತ್ತವೆ. ಈ ಆದಾಯ ಸರ್ಕಾರದ ವೆಚ್ಚಗಳನ್ನು ಸರಿದೂಗಿಸಲಾರದೇ ಹೋಗಬಹುದು. ಈ ಅಸಮಾನತೆಯನ್ನು ಸರಿದೂಗಿಸಲು ಸರ್ಕಾರಗಳು ತೆರಿಗೆಯಲ್ಲಿ ಬದಲಾವಣೆ ಮಾಡಿ ಮಾಡಿಕೊಳ್ಳುತ್ತವೆ. ಕೆಲವೊಂದು ತೆರಿಗೆಯನ್ನು ಹೆಚ್ಚಿಸುತ್ತವೆ. ತೆರಿಗೆ ವಿನಾಯ್ತಿಯನ್ನು ರದ್ದುಪಡಿಸುತ್ತವೆ. ತೆರಿಗೆಯಲ್ಲದೇ ಬೇರೆ ಮೂಲಗಳಿಂದ ಸಂಗ್ರಹಿಸುವ ಸಂಪನ್ಮೂಲವನ್ನು ತೆರಿಗೆಯೇತರ ಸಂಪನ್ಮೂಲ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಶುಲ್ಕ, ದಂಡ, ಜುಲ್ಮಾನೆಗಳು, ಸಾರ್ವಜನಿಕ ಉದ್ದಿಮೆಗಳು, ವಿಶೇಷ ಲೆವಿ, ಅನುದಾನ, ಕೊಡುಗೆಗಳು ಒಳಗೊಂಡಿರುತ್ತವೆ.
ಆದಾಯ ಮತ್ತು ಸಂಪತ್ತಿನ ಅಸಮತೋಲನವನ್ನು ಬಜೆಟ್ ಹೇಗೆ ನಿವಾರಿಸಬಲ್ಲದು?
ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಕೃಷಿ ಸಬ್ಸಿಡಿ, ಸಮಾಜ ಕಲ್ಯಾಣ, ಆರ್ಥಿಕ ದುರ್ಬಲರಿಗೆ ವಸತಿ, ಆಹಾರ ಒದಗಿಸುವುದು ಸೇರಿದಂತೆ ಹಲವು ಕಲ್ಯಾಣ ಕಾರ್ಯಗಳಿಗೆ ಸರ್ಕಾರಗಳು ಹಣ ವ್ಯಯ ಮಾಡುತ್ತವೆ. ಉಳ್ಳವರು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುವಂತೆ ತೆರಿಗೆ ಪದ್ಧತಿಯನ್ನು ರಚಿಸಲಾಗಿರುತ್ತದೆ. ಸಮಾಜದ ಹಲವು ಬಗೆಗೆಯ ಜನರಿಂದ ವಿವಿಧ ರೀತಿಯ ತೆರಿಗೆಗಳನ್ನು ಸಂಗ್ರಹಿಸಲು ಸರ್ಕಾರಗಳು ಹಲವು ರೀತಿಯ ನೀತಿ ನಿಯಮಗಳನ್ನು ಹಾಕಿಕೊಂಡಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.