ನವದೆಹಲಿ: ಏಪ್ರಿಲ್ 1ರಿಂದ ಆರಂಭವಾಗುವ ಹಣಕಾಸು ವರ್ಷದ ಖರ್ಚು–ವೆಚ್ಚದ ₹45 ಲಕ್ಷ ಕೋಟಿಯ ಕೇಂದ್ರ ಬಜೆಟ್‌ಗೆ ಯಾವುದೇ ಚರ್ಚೆ ಇಲ್ಲದೆ ಲೋಕಸಭೆಯು ಗುರುವಾರ ಅನುಮೋದನೆ ನೀಡಿದೆ. ಅದಾನಿ ಸಮೂಹಕ್ಕೆ ಸಂಬಂಧಿಸಿದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ಸತತವಾಗಿ ಪ್ರತಿಭಟನೆ ನಡೆಸು ತ್ತಿವೆ. ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸಂಸದರು ಪ್ರತಿಭಟಿಸುತ್ತಿದ್ದಾರೆ. ಹೀಗಾಗಿ, ಲೋಕಸಭೆಯಲ್ಲಿ ಚರ್ಚೆ ನಡೆದಿಲ್ಲ.
ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ಕೋಲಾಹಲದಿಂದಾಗಿ ಲೋಕಸಭೆಯ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಸಂಜೆ ಆರು ಗಂಟೆಯ ಬಳಿಕ ನಡೆದ ಕಲಾಪ ದಲ್ಲಿ ಬಜೆಟ್‌ಗೆ ಒಪ್ಪಿಗೆ ನೀಡಲಾಯಿತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಸಂಬಂಧಿ ಮಸೂದೆಗಳನ್ನು ಚರ್ಚೆ ಮತ್ತು ಮತದಾನಕ್ಕಾಗಿ ಮಂಡಿಸಿದರು. ಮಸೂದೆಗಳನ್ನು ಮತಕ್ಕೆ ಹಾಕಿದಾಗ ವಿರೋಧ ಪಕ್ಷಗಳ ಸಂಸದರು ಸ್ಪೀಕರ್ ಪೀಠದ ಮುಂದೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಮಸೂದೆಗಳಿಗೆ ಸದನವು ಅಂಗೀಕಾರ ನೀಡಿತು. ಈ ಇಡೀ ಪ್ರಕ್ರಿಯೆಯು 12 ನಿಮಿಷಗಳಲ್ಲಿ ಪೂರ್ಣಗೊಂಡಿತು.
ತೆರಿಗೆ ಪ್ರಸ್ತಾವಗಳನ್ನು ಹೊಂದಿರುವ ಹಣಕಾಸು ಮಸೂದೆ 2023 ಅನ್ನೂ ನಿರ್ಮಲಾ ಅವರು ಮಂಡಿಸಿದ್ದಾರೆ. ಇದು ಲೋಕಸಭೆಯಲ್ಲಿ ಶುಕ್ರವಾರ ಚರ್ಚೆಗೆ ಬರಲಿದೆ.
ಬಜೆಟ್ ಸಂಬಂಧಿತ ಎಲ್ಲ ಮಸೂದೆ ಗಳನ್ನು ರಾಜ್ಯಸಭೆಯಲ್ಲಿಯೂ ಮಂಡಿಸ ಲಾಗುವುದು. ಇವೆಲ್ಲವೂ ಹಣಕಾಸು ಮಸೂದೆ ವರ್ಗದಲ್ಲಿ ಬರುವುದರಿಂದ ಇವುಗಳಲ್ಲಿ ಬದಲಾವಣೆ ಮಾಡಲು ರಾಜ್ಯಸಭೆಗೆ ಅಧಿಕಾರ ಇಲ್ಲ. ಚರ್ಚೆ ಮಾಡುವುದಕ್ಕೆ ಮಾತ್ರ ಅವಕಾಶ ಇದೆ. ಹಣಕಾಸು ಮಸೂದೆಗಳಿಗೆ ಲೋಕಸಭೆ ಯ ಅಂಗೀಕಾರ ಮಾತ್ರ ಸಾಕು.
ಸಂಸತ್ ಅಧಿವೇಶನವು ಏ.6ರ ವರೆಗೆ ನಿಗದಿಯಾಗಿದೆ. ಆದರೆ, ಬಜೆಟ್ ಸಂಬಂಧಿ ಕೆಲಸಗಳು ಮುಗಿದ ಕೂಡಲೇ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದು ಎಂದು ಹೇಳಲಾಗುತ್ತಿದೆ. ಸತತವಾಗಿ ಗದ್ದಲ ನಡೆದ ಕಾರಣ ಈ ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.