ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಹಾಗೂ ಲಡಾಖ್‌ಗೆರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನಡಿ (ಎನ್‌ಆರ್‌ಎಲ್‌ಎಂ) ₹ 520 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿತು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ‘ಈ ವಿಶೇಷ ಪ್ಯಾಕೇಜ್‌ನಡಿ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು’ ಎಂದರು.
‘ಕೇಂದ್ರ ಸರ್ಕಾರ ಪುರಸ್ಕೃತ ಎಲ್ಲ ಯೋಜನೆಗಳು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ, ಲಡಾಖ್‌ನಲ್ಲಿ ಕಾಲಿಮಿತಿಯೊಳಗೆ ಅನುಷ್ಠಾನಗೊಳ್ಳಬೇಕು ಎಂಬ ಉದ್ದೇಶದನ್ವಯ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ’ ಎಂದು ಹೇಳಿದರು.
ಎನ್‌ಆರ್‌ಎಲ್‌ಎಂ, ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ. ಗ್ರಾಮೀಣ ಪ್ರದೇಶ ಜನರಿಗೆ ಸುಸ್ಥಿರ ಜೀವನೋಪಾಯ ಖಾತ್ರಿಪಡಿಸುವುದು ಹಾಗೂ ಅವರಿಗೆ ಸುಲಭವಾಗಿ ಹಣಕಾಸು ನೆರವು ಸಿಗುವಂತೆ ಮಾಡುವುದು ಸಹ ಯೋಜನೆ ಉದ್ದೇಶವಾಗಿದೆ.
ಅನುಮೋದನೆ: ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ನೂತನ ಶಿಕ್ಷಣ ನೀತಿಯಡಿ (ಎನ್‌ಇಪಿ) ರೂಪಿಸಿರುವ ‘ಸ್ಟಾರ್ಸ್’ ಯೋಜನೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
‘ಶಿಕ್ಷಣ ಸಚಿವಾಲಯ ಅಡಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಯೋಜನೆಯನ್ನು ಜಾರಿಗೊಳಿಸುವುದು. ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಹಾಗೂ ಒಡಿಶಾಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಸಚಿವ ಜಾವಡೇಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.