ನವದೆಹಲಿ: ಕೋವಿಡ್ ಕಾರಣಕ್ಕೆ ಅಮಾನತಿನಲ್ಲಿಟ್ಟಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು (ಎಂಪಿ ಲ್ಯಾಡ್ಸ್) ಮರುಸ್ಥಾಪಿಸಿ, ಯೋಜನೆ ಮುಂದುವರಿಸಲು ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 2021–22ರ ಬಾಕಿ ಉಳಿದಿರುವ ಹಣಕಾಸು ವರ್ಷಕ್ಕೆ ಈ ಯೋಜನೆ ಪುನರಾರಂಭಿಸುತ್ತಿದ್ದು, 2025–26ರವರೆಗೆ ಮುಂದುವರಿಯಲಿದೆ ಎಂದರು.
2021–22 ಹಣಕಾಸಿನ ಬಾಕಿ ಉಳಿದಿರುವ ಅವಧಿಗೆ ಪ್ರತಿ ಸಂಸದರಿಗೆ ತಲಾ ₹2 ಕೋಟಿ ಅನುದಾನವನ್ನು ಒಂದೇ ಕಂತಿನಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.
2022–23ರಿಂದ 2025–26ರ ಅವಧಿಗೆ ಪ್ರತಿ ಸಂಸದರಿಗೆ ವಾರ್ಷಿಕ ₹5 ಕೋಟಿ ಅನುದಾನವನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಅವರು ಹೇಳಿದರು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು 2020-21 ಮತ್ತು 2021-22ರ ಅವಧಿಯ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯನ್ನು ಅಮಾನತುಗೊಳಿಸಿತ್ತು. ಈ ಅನುದಾನವನ್ನು ಆರೋಗ್ಯ ಸೇವೆಗಳ ನಿರ್ವಹಣೆ ಮತ್ತು ಕೋವಿಡ್ ಪಿಡುಗಿನ ಪ್ರತಿಕೂಲ ಪರಿಣಾಮ ಎದುರಿಸಲು ಬಳಸಲಾಗುವುದು ಎಂದು ಹೇಳಿತ್ತು.
ಈ ಯೋಜನೆಯಡಿ, ಸಂಸದರು ತಮ್ಮ ಕ್ಷೇತ್ರಗಳಲ್ಲಿ ಪ್ರತಿ ವರ್ಷ ₹5 ಕೋಟಿ ವೆಚ್ಚವನ್ನು ಒಳಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಶಿಫಾರಸು ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.