ADVERTISEMENT

ಆಯುಷ್‌ ಅಭಿಯಾನ: 5 ವರ್ಷ ವಿಸ್ತರಣೆ, ₹4,600 ಕೋಟಿ ಯೋಜನೆ

ಪಿಟಿಐ
Published 14 ಜುಲೈ 2021, 19:31 IST
Last Updated 14 ಜುಲೈ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ರಾಷ್ಟ್ರೀಯ ಆಯುಷ್‌ ಅಭಿಯಾನ’ ಯೋಜನೆಯನ್ನು ಐದು ವರ್ಷಗಳವರೆಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾಗಿಯೇ ಮುಂದುವರಿಸಿಕೊಂಡು ಹೋಗಲು ಕೇಂದ್ರ ಸಂಪುಟ ಸಭೆಯು ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯು ಇದಕ್ಕೆ ಅನುಮತಿ ನೀಡಿದ್ದು, 2021ರ ಏಪ್ರಿಲ್‌ 1ರಿಂದ 2026ರ ಮಾರ್ಚ್‌ 31ರವರೆಗೆ ಈ ಯೋಜನೆ ಮುಂದುವರಿಯಲಿದೆ. ಇದಕ್ಕಾಗಿ, ₹ 4,607.30 ಕೋಟಿ (ಕೇಂದ್ರದಿಂದ ₹ 3000 ಕೋಟಿ ಹಾಗೂ ರಾಜ್ಯದಿಂದ ₹1,607 ಕೋಟಿ) ವೆಚ್ಚ ಮಾಡಲಾಗುವುದು. ಈ ಯೋಜನೆಯ ಅಡಿಯಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿಗೆ ಉತ್ತೇಜನ ನೀಡಲಾಗುವುದು, ಆಯುಷ್‌ ಕ್ಷೇಮ ಕೇಂದ್ರ (ವೆಲ್‌ನೆಸ್‌ ಸೆಂಟರ್‌), ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸುವ ಕೆಲಸ ನಡೆಯಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು.

ಆಯುಷ್‌ ಯೋಜನೆಗೆ 2014ರಲ್ಲಿ ಚಾಲನೆ ಸಿಕ್ಕಿತ್ತು.

ADVERTISEMENT

ಈಶಾನ್ಯ ಜನಪದ ವೈದ್ಯಪದ್ಧತಿ ಕೇಂದ್ರದ (ನಾರ್ತ್‌ ಈಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫೋಕ್‌ ಮೆಡಿಸಿನ್‌) ಹೆಸರನ್ನು, ಈಶಾನ್ಯ ಆಯುರ್ವೇದ ಹಾಗೂ ಜನಪದ ವೈದ್ಯಪದ್ಧತಿ ಸಂಶೋಧನಾ ಸಂಸ್ಥೆ ಎಂದು ಬದಲಿಸಲು ಸಂಪುಟ ಅನುಮತಿ ನೀಡಿದ್ದಾಗಿಯೂ ಅವರು ತಿಳಿಸಿದರು.

ಸ್ಪರ್ಧಾತ್ಮಕತೆ ಹಾಗೂ ರಪ್ತು ಉತ್ತೇಜನವನ್ನು ಹೆಚ್ಚಿಸಲು ಅನುವಾಗುವಂತೆ, ಜವಳಿ ಉದ್ಯಮಕ್ಕೆ ನೀಡಲಾಗಿದ್ದ ಕೇಂದ್ರ ಹಾಗೂ ರಾಜ್ಯದ ತೆರಿಗೆ ಹಾಗೂ ಲೆವಿಯಲ್ಲಿ ವಿನಾಯಿತಿ (ಆರ್‌ಒಎಸ್‌ಸಿಟಿಎಲ್‌) ಸೌಲಭ್ಯವನ್ನು ಮುಂದುವರಿಸಲಾಗಿದೆ.

ಈ ಕ್ರಮವು ಜವಳಿ ಉದ್ಯಮಕ್ಕೆ ನೆರವಾಗಲಿದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ) ಅಭಿಪ್ರಾಯಪಟ್ಟಿದೆ.

ಈ ಯೋಜನೆಯ ಸೌಲಭ್ಯವನ್ನು 2024ರವರೆಗೆ ಮುಂದುವರಿಸಲು ಅವಕಾಶ ನೀಡಿರುವುದರಿಂದ, ಇದು ಉದ್ಯಮಕ್ಕೆ ಸ್ಥಿರತೆ ನೀಡಲಿದ್ದು ದೀರ್ಘಾವಧಿಯ ಒಪ್ಪಂದಗಳನ್ನು ಪೂರೈಸಲು ಹಾಗೂ ಹೆಚ್ಚುವರಿ ಹೂಡಿಕೆಗೆ ಸಹಾಯವಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎ. ಶಕ್ತಿವೇಲ್ ಹೇಳಿದ್ದಾರೆ.

ಭಾರತೀಯ ಸರಕು ಸಾಗಾಣಿಕೆಯ ಕಂಪನಿಗಳಿಗೆ ಐದು ವರ್ಷಗಳವರೆಗೆ ಸಬ್ಸಿಡಿ ನೀಡುವ ₹ 1,624 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸಚಿವಾಲಯಗಳ ಹಾಗೂ ಕೇಂದ್ರದ ಸಾರ್ವಜನಿಕ ಉದ್ದಿಮೆಗಳು ನಡೆಸುವ ಜಾಗತಿಕ ಟೆಂಡರ್‌ ಮೂಲಕ ಆಮದಾಗುವ ಸರಕು ತರುವ ಕಂಪನಿಗಳಿಗೆ ರಿಯಾಯಿತಿ ಸಿಗಲಿದೆ.

ಡೆನ್ಮಾರ್ಕ್‌ ಜತೆ ಆರೋಗ್ಯ ಸಹಕಾರ

ಆರೋಗ್ಯ, ಔಷಧ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಸಂಬಂಧ ಭಾರತ ಹಾಗೂ ಡೆನ್ಮಾರ್ಕ್‌ ಆರೋಗ್ಯ ಸಚಿವಾಲಯಗಳ ನಡುವಿನ ಒಪ್ಪಂದಕ್ಕೂ ಕೇಂದ್ರ ಸಂಪುಟ ಸಮ್ಮತಿಸಿದೆ.

ದ್ವಿಪಕ್ಷೀಯ ಒಪ್ಪಂದವು ಆರೋಗ್ಯ ಕ್ಷೇತ್ರದಲ್ಲಿ ಅನ್ವೇಷಣೆ ಹಾಗೂ ತಂತ್ರಜ್ಞಾನದಲ್ಲಿ ಸಹಕಾರ ನೀಡುವುದರೊಂದಿಗೆ ಉಭಯ ದೇಶಗಳ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಹಾಗೂ ಸಂಬಂಧವನ್ನು ಬಲಪಡಿಸಲು ನೆರವಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.