ADVERTISEMENT

ಕಾನೂನು ಸಚಿವ ಕಿರಣ್‌ ರಿಜಿಜು ಬದಲಾವಣೆ: ಅರ್ಜುನ್‌ ರಾಮ್‌ ಮೇಘವಾಲ್‌ಗೆ ಹೊಣೆ

ಏಜೆನ್ಸೀಸ್
Published 18 ಮೇ 2023, 5:29 IST
Last Updated 18 ಮೇ 2023, 5:29 IST
ಕಿರಣ್‌ ರಿಜಿಜು ಮತ್ತು ಅರ್ಜುನ್ ರಾಮ್ ಮೇಘವಾಲ್
ಕಿರಣ್‌ ರಿಜಿಜು ಮತ್ತು ಅರ್ಜುನ್ ರಾಮ್ ಮೇಘವಾಲ್   

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಕೊಲಿಜಿಯಂ ವ್ಯವಸ್ಥೆ ವಿರುದ್ಧ ನಿರಂತರ ಟೀಕೆ ಮಾಡುತ್ತಾ ಬಂದಿದ್ದ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರನ್ನು ದಿಢೀರ್‌ ಬದಲಿಸಲಾಗಿದೆ. ಅರ್ಜುನ್ ರಾಮ್ ಮೇಘವಾಲ್ ಅವರನ್ನು ನೂತನ ಕಾನೂನು ಸಚಿವರನ್ನಾಗಿ ನೇಮಿಸಲಾಗಿದೆ.

ಕಿರಣ್ ರಿಜಿಜು ಅವರಿಗೆ ಭೂ ವಿಜ್ಞಾನ ಖಾತೆ ನೀಡಲಾಗಿದೆ. ಈ ಹಿಂದೆ ಜಿತೇಂದ್ರ ಸಿಂಗ್‌ ಅವರು ಈ ಖಾತೆ ಹೊಂದಿದ್ದರು.

ಮೇಘವಾಲ್‌ ಅವರು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾಗಿದ್ದರು. ಈ ಖಾತೆ ಜೊತೆಗೆ ಕಾನೂನು ಮತ್ತು ನ್ಯಾಯ ಇಲಾಖೆಯ ರಾಜ್ಯ ಸಚಿವರಾಗಿ ಸ್ವತಂತ್ರ ಉಸ್ತುವಾರಿ ನೀಡಲಾಗಿದೆ.

ADVERTISEMENT

ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಜಾರಿಯಲ್ಲಿ ಇರುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ನಿರಂತರ ವಾಗ್ದಾಳಿ ನಡೆಸಿ ಸುದ್ದಿಯಲ್ಲಿದ್ದರು. ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇರುವುದು ಹಾಗೂ ಸರಿಸುಮಾರು ಐದು ಕೋಟಿ ಪ್ರಕರಣಗಳು ಬಾಕಿ ಇರುವುದಕ್ಕೆ ಸಂಬಂಧ ಕಲ್ಪಿಸಿ ರಿಜಿಜು ಅವರು ಮಾತನಾಡಿದ್ದರು. ನ್ಯಾಯಮೂರ್ತಿಗಳ ನೇಮಕಕ್ಕೆ ಹೊಸ ವ್ಯವಸ್ಥೆಯೊಂದನ್ನು ರೂಪಿಸುವವರೆಗೆ ಪ್ರಕರಣಗಳು ಬಾಕಿ ಉಳಿಯುವ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಹೇಳಿದ್ದರು.

ವಸಾಹತುಶಾಹಿ ಕಾಲದಿಂದ ಜಾರಿಗೆ ಬಂದಿರುವ, ‘ನ್ಯಾಯಾಲಯಗಳು ದೀರ್ಘ ಅವಧಿಗೆ ರಜೆ ತೆಗೆದುಕೊಳ್ಳುವ’ ಪದ್ಧತಿ ಕೂಡ ಪ್ರಕರಣಗಳು ಬಾಕಿ ಇರುವುದಕ್ಕೆ ಒಂದು ಕಾರಣ ಎಂದು ಅವರು ಹೇಳಿದ್ದಾರೆ. ರಿಜಿಜು ಅವರು ಈಚೆಗೆ ಕೆಲವು ಸಮಯದಿಂದ ಕೊಲಿಜಿಯಂ ಅನ್ನು ದೂರುತ್ತಲೇ ಬಂದಿದ್ದರು.

ರಿಜಿಜು ಅವರು ಆಡಿದ್ದ ಮಾತುಗಳಿಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಇಷ್ಟಾದರೂ ರಿಜಿಜು ಅವರು ವಾಗ್ದಾಳಿ ಮುಂದುವರಿಸುತ್ತಲೇ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.