ನವದೆಹಲಿ: ‘ಇಂಡೊ–ಟಿಬೇಟನ್ ಗಡಿ ಪೊಲೀಸ್ ಪಡೆಗೆ (ಐಟಿಬಿಪಿ) ಏಳು ಹೊಸ ಬೆಟಾಲಿಯನ್ ಮಂಜೂರು ಮಾಡುವುದಕ್ಕೆ ಹಾಗೂ ಗಡಿ ಕಾರ್ಯಾಚರಣೆ ನೆಲೆ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯು ಹೊಸದಾಗಿ 9,400 ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಪ್ರಸ್ತಾವಕ್ಕೂ ಒಪ್ಪಿಗೆ ಸೂಚಿಸಿದೆ. ಹೀಗೆ ನೇಮಕಗೊಂಡ ಸಿಬ್ಬಂದಿಯನ್ನು ಹೊಸದಾಗಿ ನಿರ್ಮಾಣ ಮಾಡುವ 47 ಗಡಿ ಪೋಸ್ಟ್‌ಗಳ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ.
2020ರಿಂದ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದೆ. 1962ರ ಭಾರತ–ಚೀನಾ ಯುದ್ಧದ ಬಳಿಕ 90,000 ಸಿಬ್ಬಂದಿಯನ್ನು ಒಳಗೊಂಡ ಬಲಿಷ್ಠ ಐಟಿಬಿಪಿ ಸ್ಥಾಪಿಸಲಾಗಿದೆ.
‘ವೈಬ್ರಂಟ್ ವಿಲೇಜ್ ಕಾರ್ಯಕ್ರಮ’ ಜಾರಿಗೆ ಒಪ್ಪಿಗೆ: ಗಡಿ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ‘ವೈಬ್ರಂಟ್ ವಿಲೇಜ್ ಕಾರ್ಯಕ್ರಮ’ ಜಾರಿಗೊಳಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
‘ಈ ಕಾರ್ಯಕ್ರಮಕ್ಕಾಗಿ (2022-23 ರಿಂದ 2025-26) ಒಟ್ಟು ₹4,800 ಕೋಟಿ ಮೊತ್ತ ಮೀಸಲಿಡಲಾಗುತ್ತದೆ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
‘ಗಡಿ ಭಾಗದ ಜನರು ವಲಸೆ ಹೋಗುವುದನ್ನು ತಪ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.