ADVERTISEMENT

ಕೋಲ್ಕತ್ತ ಪೊಲೀಸ್‌ ಆಯುಕ್ತ, ಡಿಸಿಪಿ ವಿರುದ್ಧ ಗೃಹ ಇಲಾಖೆ ಶಿಸ್ತು ಕ್ರಮ

ರಾಜಭವನದ ಮಾನಹಾನಿಗೆ ಯತ್ನ; ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದ ರಾಜ್ಯಪಾಲರು

ಪಿಟಿಐ
Published 7 ಜುಲೈ 2024, 15:39 IST
Last Updated 7 ಜುಲೈ 2024, 15:39 IST
<div class="paragraphs"><p>ವಿನೀತ್‌ ಕುಮಾರ್‌ ಗೋಯಲ್‌</p></div>

ವಿನೀತ್‌ ಕುಮಾರ್‌ ಗೋಯಲ್‌

   

– ಚಿತ್ರ ‘ಎಕ್ಸ್‌‘ ಖಾತೆ

ಕೋಲ್ಕತ್ತ: ‘ಪಶ್ಚಿಮ ಬಂಗಾಳದ ರಾಜಭವನ ಕುರಿತು ಅಪಪ್ರಚಾರ ಮಾಡಿದ ಆರೋಪದ ಮೇಲೆ ಕೋಲ್ಕತ್ತ ಪೊಲೀಸ್‌ ಆಯುಕ್ತ ವಿನೀತ್‌ ಕುಮಾರ್‌ ಗೋಯಲ್‌, ಕೇಂದ್ರ ವಿಭಾಗದ ಡಿಸಿಪಿ ಇಂದಿರಾ ಮುಖರ್ಜಿ ವಿರುದ್ಧ ಕೇಂದ್ರ ಗೃಹ ಇಲಾಖೆಯು ಶಿಸ್ತುಕ್ರಮ ಕೈಗೊಂಡಿದೆ’ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಇಬ್ಬರು ಅಧಿಕಾರಿಗಳು ಸಾರ್ವಜನಿಕ ಸೇವಕರಾಗಿದ್ದು ಯೋಗ್ಯವಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಕ್ರಮಕ್ಕೆ ಮುಂದಾಗಿದೆ’ ಎಂದರು.

ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರಿಗೆ ಭೇಟಿಯಾಗುವಂತೆ ರಾಜ್ಯಪಾಲರ ಅನುಮತಿ ನೀಡಿದ್ದರೂ, ಅದನ್ನು ತಡೆಹಿಡಿದ ಕೋಲ್ಕತ್ತ ಪೊಲೀಸರ ನಡೆ ಸೇರಿದಂತೆ ಇತರೆ ವಿಚಾರದ ಕುರಿತು ಕಳೆದ ಜೂನ್‌ ತಿಂಗಳಲ್ಲಿ ರಾಜ್ಯಪಾಲ ಬೋಸ್‌ ಅವರು ಗೃಹ ಸಚಿವಾಲಯಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು.

‘ಬೋಸ್‌ ವರದಿ ಆಧರಿಸಿ, ಐಪಿಎಸ್‌ ಅಧಿಕಾರಿಗಳ ವಿರುದ್ಧ ಗೃಹ ಸಚಿವಾಲಯವು ಶಿಸ್ತುಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಜುಲೈ 4ರಂದೇ ಪತ್ರ ರವಾನಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜಭವನಕ್ಕೆ ನಿಯೋಜಿಸಲಾದ ಇತರೆ ಪೊಲೀಸ್‌ ಅಧಿಕಾರಿಗಳು, ಈ ವರ್ಷದ ಏಪ್ರಿಲ್‌– ಮೇ ತಿಂಗಳಲ್ಲಿ ರಾಜಭವನದ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಪ್ರಚಾರ ನೀಡಿ, ಪ್ರೋತ್ಸಾಹಿಸಿದ್ದಾರೆ’ ಎಂದು ರಾಜ್ಯಪಾಲರು ನೇರವಾಗಿ ಆರೋಪಿಸಿದ್ದರು.

‘ಈ ಐಪಿಎಸ್‌ ಅಧಿಕಾರಿಗಳು ತಮ್ಮ ನಡತೆಯ ಮೂಲಕ ರಾಜಭವನಕ್ಕೆ ಕಳಂಕ ತಂದಿದ್ದಾರೆ. ಸಾರ್ವಜನಿಕ ಸೇವಕರಾಗಿ ಸಂಪೂರ್ಣವಾಗಿ ಯೋಗ್ಯವಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ತಿಳಿಸಿದ್ದರು.

ರಾಜ್ಯಪಾಲರ ಕಚೇರಿಯ ಆಕ್ಷೇಪಣೆಯ ಹೊರತಾಗಿಯೂ ರಾಜಭವನದ ಸಿಬ್ಬಂದಿಯು ಪ್ರವೇಶ ಹಾಗೂ ನಿರ್ಗಮನಕ್ಕೆ ಹೊಸ ಗುರುತಿನ ಚೀಟಿ ನೀಡುವ ಮೂಲಕ ಕೋಲ್ಕತ್ತ ಪೊಲೀಸರು ಹೊಸ ಪರಂಪರೆ ಹುಟ್ಟುಹಾಕಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಸಂತ್ರಸ್ತರ ನಿಯೋಗವು ರಾಜ್ಯಪಾಲ ಬೋಸ್‌ ಭೇಟಿಗೆ ಮುಂದಾಗಿತ್ತು. ಭೇಟಿಗೆ ರಾಜ್ಯಪಾಲರು ಅನುಮತಿ ನೀಡಿದರೂ ಕೂಡ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು. ನಂತರ ಸಂತ್ರಸ್ತರು, ಹೈಕೋರ್ಟ್‌ ಮೂಲಕ ಅನುಮತಿ ಪಡೆದು ರಾಜ್ಯಪಾಲರನ್ನು ಭೇಟಿಯಾಗಿದ್ದರು ಎಂದು ವರದಿಯಲ್ಲಿ ಬೊಟ್ಟು ಮಾಡಿದ್ದಾರೆ.

‘ಗೃಹ ಸಚಿವಾಲಯದ ಶಿಸ್ತುಕ್ರಮದ ಕುರಿತು ಯಾವುದೇ ಮಾಹಿತಿ ಇಲ್ಲ. ಏನಾದರೂ ಬಂದಿದ್ದರೆ, ರಾಜ್ಯ ಸರ್ಕಾರಕ್ಕೆ ಹೋಗಿರಬೇಕು ’ ಎಂದು ಪೊಲೀಸ್‌ ಆಯುಕ್ತ ವಿನೀತ್‌ ಗೋಯಲ್‌ ತಿಳಿಸಿದರು.

ಡಿಸಿಪಿ ಇಂದಿರಾ ಮುಖರ್ಜಿ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ರಾಜ್ಯ ಗೃಹ ಸಚಿವಾಲಯದ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅವರಿಗೆ ಕರೆ ಮಾಡಿದರೂ, ಉತ್ತರಿಸಲು ನಿರಾಕರಿಸಿದರು.

ಇಂದಿರಾ ಮುಖರ್ಜಿ– ಚಿತ್ರ ‘ಎಕ್ಸ್‌‘ ಖಾತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.