ADVERTISEMENT

ರೈತನಾಯಕ ಟಿಕಾಯತ್ ಅವರನ್ನು ‘ಎರಡನೇ ದರ್ಜೆ ವ್ಯಕ್ತಿ’ ಎಂದ ಆಶಿಶ್ ಮಿಶ್ರಾ

ಲಖಿಂಪುರ ಖೇರಿ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 16:36 IST
Last Updated 23 ಆಗಸ್ಟ್ 2022, 16:36 IST
ಕೇಂದ್ರ ಸಚಿವ ಅಜಯ್‌ ಮಿಶ್ರಾ ಹಾಗೂ ರೈತ ನಾಯಕ ರಾಕೇಶ್ ಟಿಕಾಯತ್‌ (ಪಿಟಿಐ ಚಿತ್ರಗಳು)
ಕೇಂದ್ರ ಸಚಿವ ಅಜಯ್‌ ಮಿಶ್ರಾ ಹಾಗೂ ರೈತ ನಾಯಕ ರಾಕೇಶ್ ಟಿಕಾಯತ್‌ (ಪಿಟಿಐ ಚಿತ್ರಗಳು)   

ಲಖಿಂಪುರ ಖೇರಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ತಮ್ಮ ಪುತ್ರನ ಪಾತ್ರ ಇರುವ ಆರೋಪದ ಕಾರಣ ರಾಜೀನಾಮೆಯ ಬೇಡಿಕೆ ಎದುರಿಸುತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು, ‘ರಾಕೇಶ್ ಟಿಕಾಯತ್ ಅವರಂಥ ವ್ಯಕ್ತಿಗಳಿಗೆ ನಾನು ಉತ್ತರಿಸುವುದಿಲ್ಲ. ಟಿಕಾಯತ್ ‘ಎರಡನೇ ದರ್ಜೆ ವ್ಯಕ್ತಿ’ ಎಂದು ಹೇಳಿದ್ದಾರೆ.

ಖೇರಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಿಶ್ರಾ ಅವರು ಭಾಷಣ ಮಾಡಿರುವ ವಿಡಿಯೊ ಹರಿದಾಡುತ್ತಿದ್ದು, ಅದರಲ್ಲಿ ತಮ್ಮ ವಿರುದ್ಧದ ಆರೋಪವನ್ನು ಅವರು ನಿರಾಕರಿಸಿದ್ದಾರೆ.

‘ಒಂದು ವೇಳೆ ನಾನು ಕಾರಿನಲ್ಲಿ ಲಖನೌಗೆ ಹೋಗುತ್ತಿರುವಾಗ ರಸ್ತೆಗಳಲ್ಲಿ ನಾಯಿಗಳು ಬೊಗಳಿದರೆ ಅಥವಾ ನನ್ನ ಕಾರಿಗೆ ಬೆನ್ನತ್ತಿ ಬಂದರೆ, ಅದು ಅವುಗಳ ಸ್ವಭಾವ. ಈ ಸ್ವಭಾವವು ನನ್ನಲ್ಲಿಲ್ಲದ್ದ ಕಾರಣ ನಾನು ಅದರ ಬಗ್ಗೆ ಏನನ್ನೂ ಹೇಳಲಾರೆ. ಆದರೆ, ಈ ವಿಷಯವು ಮುಂ‌ಚೂಣಿಗೆ ಬಂದರೆ ನಾನು ಎಲ್ಲರಿಗೂ ಉತ್ತರಿಸುತ್ತೇನೆ. ನಿಮ್ಮ ಬೆಂಬಲದ ಬಗ್ಗೆ ನನಗೆ ವಿಶ್ವಾಸವಿದೆ’ ಎಂದು ಮಿಶ್ರಾ ಹೇಳಿದ್ದಾರೆ.

ADVERTISEMENT

‌ಟಿಕಾಯತ್ ಅವರ ನೇತೃತ್ವದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕಳೆದ ವಾರ ಲಖಿಂಪುರದಲ್ಲಿ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 75 ಗಂಟೆಗಳ ದೀರ್ಘಾವಧಿಯ ಧರಣಿ ಕೈಗೊಂಡಿತ್ತು.

‘ಟಿಕಾಯತ್ ಈ ರೀತಿಯ ರಾಜಕೀಯ ಮಾಡುತ್ತಿದ್ದಾರೆ. ಅವರು ಜೀವಾನೋಪಾಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಉತ್ತರವನ್ನು ನೀಡಲಾಗುವುದು’ ಎಂದು ಮಿಶ್ರಾ ತಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹೇಳಿರುವುದು ವಿಡಿಯೊದಲ್ಲಿದೆ.

‘ರಾಕೇಶ್ ಟಿಕಾಯತ್ ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ‘ಎರಡನೇ ದರ್ಜೆಯ ವ್ಯಕ್ತಿ’ (ದೋ ಕೌಡಿ ಕಾ ಆದ್ಮಿ). ಅವರು ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಇಂಥ ವ್ಯಕ್ತಿ ಯಾವುದನ್ನಾದರೂ ವಿರೋಧಿಸಿದರೆ ಅದಕ್ಕೆ ಯಾವುದೇ ಬೆಲೆ ಇರದು. ಹಾಗಾಗಿ, ಅಂಥ ಜನರಿಗೆ ನಾನು ಉತ್ತರಿಸುವುದಿಲ್ಲ, ಅದು ಪ್ರಸ್ತುತವೂ ಅಲ್ಲ’ ಎಂದು ಮಿಶ್ರಾ ಹೇಳಿದ್ದಾರೆ.

‘ಜನರು ಪ್ರಶ್ನೆಗಳು ಕೇಳುತ್ತಲೇ ಇರುತ್ತಾರೆ. ಅಂತೆಯೇ ಪತ್ರಿಕೋದ್ಯಮದ ಜತೆಗೆ ಯಾವ ಸಂಬಂಧವೂ ಇಲ್ಲದ ಕೆಲವು ಮೂರ್ಖ ಪತ್ರಕರ್ತರು ಕೆಲ ತಳಬುಡವಿಲ್ಲದ ವಿಷಯಗಳ ಬಗ್ಗೆ ಗೊಂದಲಗಳನ್ನು ಸೃಷ್ಟಿಸಲು ಬಯಸುತ್ತಾರೆ’ ಎಂದಿದ್ದಾರೆ.

ಮಿಶ್ರಾ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಟಿಕಾಯತ್, ‘ಒಂದು ವರ್ಷದಿಂದ ಅವರ ಮಗ ಜೈಲಿನಲ್ಲಿದ್ದಾರೆ. ಹಾಗಾಗಿ ಮಿಶ್ರಾ ಕೋಪಗೊಳ್ಳುವುದು ಸಹಜ’ ಎಂದು ಹೇಳಿದ್ದಾರೆ.

ಲಖಿಂಪುರದಲ್ಲಿ ಮಿಶ್ರಾ ಅವರು ‘ಗೂಂಡಾ ರಾಜ್’ ಸೃಷ್ಟಿಸಿದ್ದಾರೆ. ಅವರ ಭಯೋತ್ಪಾದನೆಯ ಆಳ್ವಿಕೆಯನ್ನು ಮುಕ್ತಾಯಗೊಳಿಸಲು ಶೀಘ್ರದಲ್ಲೇ ‘ಮುಕ್ತಿ ಅಭಿಯಾನ’ ಆರಂಭಿಸುವುದಾಗಿ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.