ಒಡಿಶಾ : ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಮೂಲಕ ನೇಮಕವಾಗುವ ಹೆಚ್ಚಿನ ಅಧಿಕಾರಿಗಳು ದರೋಡೆಕೋರರಾಗಿರುತ್ತಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಮತ್ತು ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ ತುಡು ಹೇಳಿಕೆ ನೀಡಿದ್ದು, ಇದೀಗ ಹಲವು ವಿವಾದಗಳಿಗೆ ಎಡೆ ಮಾಡಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಬಲಿಪಾಲ್‌ನ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಚಿವರು ಭಾಗವಹಿಸಿದ್ದರು. ಈ ವೇಳೆ ಸಚಿವರು ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಯುಪಿಎಸ್‌ಸಿ ಮೂಲಕ ನೇಮಕವಾಗುವ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಯುಪಿಎಸ್‌ಸಿ ಪರೀಕ್ಷೆ ಮೂಲಕ ಆಯ್ಕೆಯಾದವರು ತುಂಬಾ ಪರಿಣಿತರಾಗಿದ್ದು, ಉತ್ತಮ ಸ್ಥಾನದಲ್ಲಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆ ಮಾತು ಸುಳ್ಳಾಗಿದೆ. ಈಗ ನೇಮಕಗೊಂಡ ಹೆಚ್ಚಿನ ಅಧಿಕಾರಿಗಳು ದರೋಡೆಕೋರ ಮನಸ್ಥಿತಿಯನ್ನು ಹೊಂದಿರುತ್ತಾರೆ. ಎಲ್ಲ ಅಧಿಕಾರಿಗಳು ಹಾಗೇ ಇರುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ, ಅದರಲ್ಲಿ ಹೆಚ್ಚಿನವರು ಹಾಗೆ ಇರುತ್ತಾರೆ‘ ಎಂದು ಹೇಳಿದ್ದಾರೆ.
‘ಯುಪಿಎಸ್‌ಸಿ ಕಚೇರಿಯು ದೆಹಲಿಯಲ್ಲಿರುವ ನಮ್ಮ ನಿವಾಸದ ಹಿಂಭಾಗದಲ್ಲಿತ್ತು. ಆರಂಭದಲ್ಲಿ ಅದರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೆ. ಆದರೆ, ಆ ಮನಸ್ಥಿತಿ ಈಗ ಬದಲಾಗಿದೆ. ನೈತಿಕ ಮತ್ತು ಆಧ್ಯಾತ್ಮಕ ಶಿಕ್ಷಣದ ಕೊರತೆಯೇ ಈಗಿನ ಯುವಕರನ್ನು ದರೋಡೆಕೋರ ಮನಸ್ಥಿತಿಗೆ ಸೆಳೆದಿದೆ. ಇಷ್ಟು ವಿದ್ಯಾವಂತರಿದ್ದರು ಯಾಕೆ ನಮ್ಮ ಸಮಾಜ ಇಷ್ಟು ಭ್ರಷ್ಟಾಚಾರದಿಂದ ಕೂಡಿದೆ?‘ ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಕೋಳಿ ಕಳ್ಳನಿಗೆ ಈ ದೇಶದಲ್ಲಿ ಕಠಿಣ ಶಿಕ್ಷೆಯಾಗುತ್ತದೆ. ಆದರೆ, ದೊಡ್ಡ ದೊಡ್ಡ ಮಾಫಿಯಾಗಳಲ್ಲಿ ಶಾಮೀಲಾಗಿರುವ ಇಂತಹ ಅಧಿಕಾರಿಗಳನ್ನು ಸರ್ಕಾರವೇ ರಕ್ಷಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ತುಡು ಅವರ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಯುಪಿಎಸ್‌ಎಸಿ ಪರೀಕ್ಷೆಗಳು ಪಾರದರ್ಶಕತೆಯಿಂದ ಕೂಡಿಲ್ಲ ಎಂದೂ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.