ADVERTISEMENT

ಸಂಜೀವನಿ ಹಗರಣ: ರಾಜಸ್ಥಾನ ಸಿಎಂ ಗೆಹಲೋತ್ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2023, 13:44 IST
Last Updated 4 ಮಾರ್ಚ್ 2023, 13:44 IST
ಗಜೇಂದ್ರ ಸಿಂಗ್ ಶೆಖಾವತ್‌ ಮತ್ತು ಅಶೋಕ್ ಗೆಹಲೋತ್
ಗಜೇಂದ್ರ ಸಿಂಗ್ ಶೆಖಾವತ್‌ ಮತ್ತು ಅಶೋಕ್ ಗೆಹಲೋತ್   

ನವದೆಹಲಿ: ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ವಿರುದ್ಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆ ನಡೆಯಲಿದ್ದು, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜಿತ್‌ ಸಿಂಗ್ ಜಸ್ಪಾಲ್ ಅವರು ಶೆಖಾವತ್‌ ಪರ ಸಾಕ್ಷಿಗಳ ಹೇಳಿಕೆ ದಾಖಲಿಸಲಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಸಂಜೀವನಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿ ನನ್ನ ವಿರುದ್ಧ ಆರೋಪಗಳು ಸಾಬೀತಾಗಿವೆ ಎಂದು ಅಶೋಕ್ ಗೆಹಲೋತ್‌ ಭಾಷಣ ಮಾಡಿದ್ದಾರೆ. ಇದರಿಂದಾಗಿ ತಮ್ಮ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಶೆಖಾವತ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಮ್ಮ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಗೆಹಲೋತ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಶೆಖಾವತ್‌ ಪರ ಹಿರಿಯ ವಕೀಲ ವಿಕಾಸ್ ಪಹ್ವಾ ವಾದ ಮಂಡಿಸಿದ್ದಾರೆ.

ಸಂಜೀವನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಒಂದು ಲಕ್ಷಕ್ಕೂ ಹೆಚ್ಚು ಸಂತ್ರಸ್ತರ ಜೀವಮಾನದ ಠೇವಣಿಗಳನ್ನು ಲೂಟಿ ಮಾಡಿದ್ದು, ಸುಮಾರು ₹ 900 ಕೋಟಿ ಅವ್ಯವಹಾರ ನಡೆದಿದೆ. ಪೊಲೀಸ್ ತನಿಖೆಯಲ್ಲಿ ಶೆಖಾವತ್‌ ಕೈವಾಡ ಸಾಬೀತಾಗಿದೆ ಎಂದು ಗೆಹಲೋತ್‌ ಆರೋಪಿಸಿದ್ದರು.

‘ಈ ಪ್ರಕರಣದಲ್ಲಿ, ಆಸ್ತಿಯನ್ನು ಲಗತ್ತಿಸುವ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇದೆಯೇ ಹೊರತು ಎಸ್‌ಒಜಿಗೆ ಅಲ್ಲ’. ಶೆಖಾವತ್‌ ಈ ಪ್ರಕರಣದಲ್ಲಿ ಸಾರ್ವಜನಿಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೆಹಲೋತ್‌ ಟ್ವೀಟ್ ಮಾಡಿದ್ದರು.

ಸಂಜೀವನಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಗೆ ಸಂಬಂಧಿಸಿದ ಆಸ್ತಿಗಳ ದಾಖಲೆ ಒದಗಿಸುವಂತೆ ಎಸ್‌ಒಜಿ ಕಳೆದ ಎರಡು ವರ್ಷಗಳಲ್ಲಿ ಐದು ಬಾರಿ ಇಡಿಯನ್ನು ಒತ್ತಾಯಿಸಿದೆ ಎಂದು ಗೆಹಲೋತ್‌ ಹೇಳಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕನ ಮಗನನ್ನು ಸೋಲಿಸಿದ್ದರಿಂದ ಹತಾಶೆಯಿಂದಾಗಿ ಗೆಹ್ಲೋಟ್ ಈ ರೀತಿ ತಮ್ಮ ಹೆಸರನ್ನು ಹಾಳು ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಶೇಖಾವತ್ ತಿರುಗೇಟು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.