ADVERTISEMENT

ಛತ್ತೀಸಗಢದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ: ಮನ್ಸುಖ್ ಮಾಂಡವಿಯಾ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2023, 10:45 IST
Last Updated 28 ಅಕ್ಟೋಬರ್ 2023, 10:45 IST
ಮನ್ಸುಖ್ ಮಾಂಡವಿಯಾ
ಮನ್ಸುಖ್ ಮಾಂಡವಿಯಾ   

-ಸಂಗ್ರಹ ಚಿತ್ರ

ರಾಯಪುರ (ಛತ್ತೀಸಗಢ): 'ಪ್ರಜಾಪ್ರಭುತ್ವದಲ್ಲಿ ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು. ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದು ನಾಗರಿಕರ ಹಕ್ಕು. ಆದರೆ ಛತ್ತೀಸಗಢದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಆರೋಪಿಸಿದ್ದಾರೆ.

'ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದ ಆರೋಪದ ಕುರಿತು ಸಚಿವರು ಛತ್ತೀಸ್‌ಗಢ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ನಮ್ಮ ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ' ಎಂದು ಅವರು ಶುಕ್ರವಾರ ಹೇಳಿದ್ದರು.

ADVERTISEMENT

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಇಂದು ನಾವು ರಾಜ್ಯ ಚುನಾವಣಾ ಆಯೋಗದ ಮುಂದೆ ನಮ್ಮ ಅಭಿಪ್ರಾಯ ಮಂಡಿಸಿದ್ದೇವೆ. ನಮ್ಮ ಸಮಸ್ಯೆಗಳನ್ನು (ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ) ಬಗೆಹರಿಸದಿದ್ದರೆ ನಾವು ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ. ಛತ್ತೀಸಗಢದ ಜನರು ಯಾವುದೇ ಭಯವಿಲ್ಲದೆ ಮತ ಚಲಾಯಿಸುತ್ತಾರೆ. ನಮ್ಮ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ನಮಗೆ ವಿಶ್ವಾಸವಿದೆ' ಎಂದು ಹೇಳಿದರು.

‘ಬಿಜೆಪಿಯ ಧ್ವಜ ಇರುವ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ನಮಗೆ ಹಲವು ಸ್ಥಳಗಳಿಂದ ದೂರುಗಳು ಬಂದಿವೆ. ಅಲ್ಲದೇ ಕಾರ್ಯಕರ್ತರನ್ನು ಹಿಂಸಿಸಲಾಗುತ್ತಿದೆ. ಬಿಜೆಪಿ ನಾಯಕರಲ್ಲಿ ಭಯ ಮೂಡಿಸಲು ಹತ್ಯೆ ಮಾಡಲಾಗುತ್ತಿದೆ. ಹಲವು ಕಡೆಗಳಲ್ಲಿ ಬಹಿರಂಗವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಯುತವಾಗಿರುವುದು ಮುಖ್ಯ' ಎಂದು ಅವರು ಹೇಳಿದರು.

2 ಹಂತದಲ್ಲಿ ಮತದಾನ: ಐದು( ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂ) ರಾಜ್ಯಗಳ ಪೈಕಿ ಛತ್ತೀಸಗಢದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದೆ. ನ.7ರಂದು 20 ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಉಳಿದ 70 ಸ್ಥಾನಗಳಿಗೆ ನ.17 ರಂದು ಮತದಾನ ನಡೆಯಲಿದೆ. ಡಿ.3ರಂದು ಎಲ್ಲಾ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.