ಭರುಚ್ (ಗುಜರಾತ್): ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ಸ್ಟಾರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವ ಪೋಸ್ಟ್ ಅಥವಾ ವಿಡಿಯೊಗಳಿಗೆ ಗೌರವಧನ ರೂಪದಲ್ಲಿ ಲಕ್ಷಾಂತರ ರೂಪಾಯಿ ಸಂದಾಯವಾಗುತ್ತದೆ. ಇಂಥದ್ದೇ ಮಾರ್ಗದಲ್ಲಿ ಗೌರವಧನ ಪಡೆಯುವಲ್ಲಿ ರಾಜಕಾರಣಿಗಳೂ ಹಿಂದಿಲ್ಲ ಎಂಬುದಕ್ಕೆ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ತಾಜಾ ಉದಾಹರಣೆ. ಅವರು ಯುಟ್ಯೂಬ್‌ನಿಂದ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊ ಉಪನ್ಯಾಸಗಳ ವೀಕ್ಷಣೆಯು ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಏರಿಕೆಯಾಗಿದ್ದು, ಯುಟ್ಯೂಬ್‌ನಿಂದ ತಿಂಗಳಿಗೆ ಗೌರವಧನದ ರೂಪದಲ್ಲಿ ₹ 4 ಲಕ್ಷ ರೂಪಾಯಿ ಪಡೆಯುತ್ತಿರುವುದಾಗಿ ಶುಕ್ರವಾರ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೋವಿಡ್–19 ಸಾಂಕ್ರಾಮಿಕದ ಸಮಯದಲ್ಲಿ ಗಡ್ಕರಿ ಅವರು ಎರಡು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದ್ದಾರೆ.
'ನಾನು ಬಾಣಸಿಗನಾಗಿ ಮನೆಯಲ್ಲಿ ಅಡುಗೆ ತಯಾರಿ ಶುರು ಮಾಡಿದೆ ಹಾಗೂ ವಿಡಿಯೊ ಕಾನ್ಫರೆನ್ಸ್‌ಗಳ ಮೂಲಕ ಉಪನ್ಯಾಸಗಳನ್ನು ನೀಡಿದೆ. ಆನ್‌ಲೈನ್‌ನಲ್ಲಿ ನಾನು 950ಕ್ಕೂ ಹೆಚ್ಚು ಉಪನ್ಯಾಸಗಳನ್ನು ಪ್ರಸ್ತುತ ಪಡಿಸಿದ್ದೇನೆ. ವಿದೇಶದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಉಪನ್ಯಾಸಗಳನ್ನು ನೀಡಿದ್ದು, ಯುಟ್ಯೂಬ್‌ನಲ್ಲಿ ಆ ವಿಡಿಯೊಗಳು ಅಪ್‌ಲೋಡ್ ಆಗಿವೆ' ಎಂದಿದ್ದಾರೆ.
'ಯುಟ್ಯೂಬ್‌ನ ನನ್ನ ಚಾನೆಲ್‌ಗೆ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದೆ ಹಾಗೂ ನನಗೆ ಪ್ರತಿ ತಿಂಗಳು ಯುಟ್ಯೂಬ್ ಗೌರವಧನದ ರೂಪದಲ್ಲಿ ₹ 4 ಲಕ್ಷ ಪಾವತಿಸುತ್ತಿದೆ' ಎಂದು ಗಡ್ಕರಿ ತಮ್ಮ ಪರ್ಯಾಯ ಗಳಿಕೆ ಮೂಲವನ್ನು ಬಹಿರಂಗ ಪಡಿಸಿದ್ದಾರೆ.
ಭಾರತದಲ್ಲಿ ಯಾರು ಉತ್ತಮ ಕಾರ್ಯಗಳನ್ನು ಮಾಡುತ್ತಾರೆಯೋ ಅವರಿಗೆ ಪ್ರೋತ್ಸಾಹ ಸಿಗುವುದಿಲ್ಲ ಎಂದು ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಭರುಚ್‌ನಲ್ಲಿ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ (ಡಿಎಂಇ) ಕಾಮಗಾರಿ ಪರಿಶೀಲನೆ ನಡೆಸಿದ ಗಡ್ಕರಿ, ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರು ಮತ್ತು ಸಲಹೆಗಾರರಿಗೆ ಸಚಿವಾಲಯವು ರೇಟಿಂಗ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.