ADVERTISEMENT

ಹೇಳಿಕೆ ವಿವಾದ: ಡಿಕುನ್ಹ ಕ್ಷಮೆ ಕೇಳಿದ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:29 IST
Last Updated 22 ನವೆಂಬರ್ 2024, 15:29 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ನವದೆಹಲಿ: ಕೋವಿಡ್ ಹಗರಣದ ಕುರಿತ ವರದಿ ಬಗ್ಗೆ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿಕುನ್ಹ ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.

ವಿಧಾನಸಭೆ ಉಪ ಚುನಾವಣೆ ಪ್ರಚಾರ ಭಾಷಣದಲ್ಲಿ ಜೋಶಿ ಅವರು ಡಿಕುನ್ಹ ಅವರನ್ನು ಟೀಕಿಸಿದ್ದರು. ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಡಿಕುನ್ಹ ಮನಸ್ಸಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ನನ್ನ ಸುದೀರ್ಘ ವರ್ಷಗಳ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವತ್ತೂ ಪ್ರತ್ಯಕ್ಷ-ಪರೋಕ್ಷವಾಗಿ ನ್ಯಾಯಾಂಗದ ಸದಸ್ಯರ ಘನತೆಗೆ ಚ್ಯುತಿ ಬರುವಂತೆ ನಡೆದುಕೊಂಡಿಲ್ಲ ಮತ್ತು ಹೇಳಿಕೆಯನ್ನೂ ನೀಡಿಲ್ಲ’ ಎಂದು ಜೋಶಿ ತಿಳಿಸಿದ್ದಾರೆ.

ADVERTISEMENT

ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ಆಯೋಗದಿಂದ ವರದಿ ತರಿಸಿಕೊಂಡಿದೆ ಎಂದು ಹೇಳಿದ್ದೇನೆ ಹೊರತು ತಮ್ಮ ಮೇಲೆ ಯಾವುದೇ ವೈಯಕ್ತಿಕ ಹೇಳಿಕೆ ನೀಡಿಲ್ಲ. ತಮಗೆ ಮತ್ತು ಆಯೋಗಕ್ಕೆ ಅಪಕೀರ್ತಿ ತರುವ ಉದ್ದೇಶ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.