ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವಂನತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವರ ಪಟ್ಟಿಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೆಸರು ಮುಂಚೂಣಿಯಲ್ಲಿದೆ. ಸದ್ಯ,ಇವರು ರಾಜ್ಯಸಭೆ ಸದಸ್ಯ.
ಈ ಕ್ಷೇತ್ರದ ಸಂಸದ, ಕಾಂಗ್ರೆಸ್‌ನ ಶಶಿ ತರೂರ್, ಪುನರಾಯ್ಕೆ ಬಯಸಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಕೇರಳದಲ್ಲಿ ಖಾತೆ ತೆರೆಯುವ ಹೆಜ್ಜೆಯಾಗಿ ತಿರುವನಂತಪುರ ಕ್ಷೇತ್ರದ ಮೇಲೆ ಬಿಜೆಪಿ ರಾಷ್ಟ್ರೀಯ ನಾಯಕರು ಹೆಚ್ಚು ಗಮನಹರಿಸಿದ್ದಾರೆ. ಇಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿ ಅಭ್ಯರ್ಥಿಯಾಗಬಹುದು ಎಂಬ ವದಂತಿಗಳಿವೆ.
ಆದರೆ, ಬಿಜೆಪಿಯು ಈ ವದಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಉಳಿದಂತೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್, ನಟಿ ಹಾಗೂ ನೃತ್ಯಪಟು ಶೋಭನಾ ಅವರ ಹೆಸರುಗಳು ಕೇಳಿಬರುತ್ತಿವೆ.
ಬಿಜೆಪಿ ಮೂಲಗಳ ಪ್ರಕಾರ, ಸದ್ಯ ರಾಜೀವ್ ಚಂದ್ರಶೇಖರ್ ಅವರ ಹೆಸರು ಮುಂಚೂಣಿಯಲ್ಲಿದೆ. ಸಚಿವರು ಬೆಂಗಳೂರಿನಿಂದ ಸ್ಪರ್ಧಿಸಲು ಬಯಸಿದ್ದರೂ, ಆ ಸಾಧ್ಯತೆ ಕಡಿಮೆ. ತಿರುವನಂತಪುರ ಕ್ಷೇತ್ರವು 2ನೇ ಆಯ್ಕೆಯಾಗಬಹುದು.
ರಾಜೀವ್ ಚಂದ್ರಶೇಖರ್ ಅವರ ತಂದೆ–ತಾಯಿ ಮಲೆಯಾಳಿಗರು. 59 ವರ್ಷ ವಯಸ್ಸಿನ ಸಚಿವರು ಅಹಮದಾಬಾದ್‌ನಲ್ಲಿ ಜನಿಸಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.