ADVERTISEMENT

ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್‌ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2020, 16:20 IST
Last Updated 8 ಅಕ್ಟೋಬರ್ 2020, 16:20 IST
 ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌
ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌   

ನವದೆಹಲಿ: ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌(74) ಗುರುವಾರ ನಿಧನರಾದರು. ಆ ಬಗ್ಗೆ ಪುತ್ರ ಚಿರಾಗ್‌ ಪಾಸ್ವಾನ್‌ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸಚಿವ, ಬಿಹಾರದ ಲೋಕ ಜನಶಕ್ತಿ ಪಕ್ಷದ ನಾಯಕ ರಾಮ್‌ವಿಲಾಸ್‌ ಪಾಸ್ವಾನ್ ಅವರು ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎದೆ ನೋವಿನ ಕಾರಣ ಕೆಲವು ವಾರಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ತಂದೆ ಅಪ್ಪಿಕೊಂಡಿರುವ ಹಳೆಯ ಫೋಟೊವೊಂದನ್ನು ಪ್ರಕಟಿಸಿರುವ ಚಿರಾಗ್‌ 'ಅಪ್ಪಾ...ಈಗ ನೀವು ಈ ಜಗತ್ತಿನಲ್ಲಿ ಇಲ್ಲ, ಆದರೆ ನನಗೆ ತಿಳಿದಿದೆ ನೀವು ಎಲ್ಲೇ ಇದ್ದರೂ ಸದಾ ನನ್ನೊಂದಿಗೆ ಇರುತ್ತೀರ. ಮಿಸ್‌ ಯು ಪಾಪಾ...' ಎಂದಿದ್ದಾರೆ.

ADVERTISEMENT

'ಶನಿವಾರ (ಅ.3) ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಪುನಃ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಗತ್ಯಬಿದ್ದರೆ ಕೆಲವು ವಾರಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು' ಎಂದು ಪುತ್ರ ಚಿರಾಗ್ ಭಾನುವಾರ ಹೇಳಿದ್ದರು.

ಸುಮಾರು 50 ವರ್ಷಗಳ ರಾಜಕೀಯ ಜೀವನದಲ್ಲಿ ರಾಮ್‌ ವಿಲಾಸ್ ಪಾಸ್ವಾನ್‌ ಅವರು ದೇಶದ ಪ್ರಮುಖ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಲೋಕ ಜನಶಕ್ತಿ ಪಾರ್ಟಿಯ (ಎಲ್‌ಜೆಪಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು, ಅವರ ಪುತ್ರ, ಸಂಸದ ಚಿರಾಗ್‌ ಪಾಸ್ವಾನ್‌ ಅವರಿಗೆ ಪಕ್ಷದ ಹೊಣೆಗಾರಿಕೆ ನೀಡಿದ್ದರು. ರಾಮ್‌ ವಿಲಾಸ್ ಪಾಸ್ವಾನ್‌ 19 ವರ್ಷಗಳು ಎಲ್‌ಜೆಪಿ ಅಧ್ಯಕ್ಷರಾಗಿದ್ದರು.

ಪಾಸ್ವಾನ್‌ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಕೇಂದ್ರ ಸಂಪುಟದಲ್ಲಿ ರಾಮ್‌ ವಿಲಾಸ್ ಪಾಸ್ವಾನ್‌ ಅವರು ರೈಲ್ವೆ ಸಚಿವರಾಗಿ ಹೊಣೆ ನಿರ್ವಹಿಸಿದ್ದರು. ಅವರು ಎಂಟು ಬಾರಿ ಸಂಸದರಾಗಿದ್ದರು. ನನಗೆ ಅತ್ಯಂತ ಪ್ರೀತಿ ಪಾತ್ರರಾಗಿದ್ದರು. ಅಂಥ ಹಿರಿಯ ಮುಖಂಡರನ್ನು ಕಳೆದು ಕೊಂಡಿರುವುದು ದೇಶಕ್ಕೆ ದೊಡ್ಡ ನಷ್ಟ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.