ಸುಲ್ತಾನ್‌ಪುರ (ಉತ್ತರಪ್ರದೇಶ): ‘ಮದ್ಯವ್ಯಸನಿ ಅಧಿಕಾರಿಗಿಂತ ವ್ಯಸನಗಳಿಲ್ಲದ ಆಟೋರಿಕ್ಷಾ ಚಾಲಕ ಇಲ್ಲವೇ ಕೂಲಿ ಕಾರ್ಮಿಕ ಉತ್ತಮ ವರ ಎಂದು ಸಾಬೀತಾಗಬಹುದು. ಹಾಗಾಗಿ, ಪೋಷಕರು ತಮ್ಮ ಪುತ್ರಿಯರು ಅಥವಾ ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ವಿವಾಹ ಮಾಡಿಕೊಡಬಾರದು’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಮನವಿ ಮಾಡಿದ್ದಾರೆ.
ಇಲ್ಲಿನ ಲಂಬುವ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಮದ್ಯವರ್ಜನ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್, ‘ಮದ್ಯವ್ಯಸನಿಗಳ ಜೀವಿತಾವಧಿಯು ಕಡಿಮೆಯಾಗಿರುತ್ತದೆ. ನಾನು ಸಂಸದನಾಗಿ, ನನ್ನ ಪತ್ನಿ ಶಾಸಕಿಯಾಗಿದ್ದರೂ ಮದ್ಯವ್ಯಸನಿಯಾಗಿದ್ದ ನಮ್ಮ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಜನಸಾಮಾನ್ಯರು ಏನು ಮಾಡಬಲ್ಲರು’ ಎಂದರು.
‘ನನ್ನ ಮಗ ಆಕಾಶ್ ಕಿಶೋರ್, ಸ್ನೇಹಿತರೊಂದಿಗೆ ಸೇರಿ ಮದ್ಯ ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದ. ಈ ಕೆಟ್ಟ ಚಟದಿಂದ ಆತನನ್ನು ಬಿಡಿಸಬೇಕೆಂದು ಮದ್ಯವರ್ಜನ ಕೇಂದ್ರಕ್ಕೂ ದಾಖಲಿಸಿದ್ದೆವು. ಅಲ್ಲಿಂದ ಬಂದ ಮೇಲೆ ಆರು ತಿಂಗಳ ಬಳಿಕ ಮದುವೆಯೂ ಆದ. ಆದರೆ, ಮದುವೆ ಬಳಿಕ ಮತ್ತೆ ಕುಡಿಯಲಾರಂಭಿಸಿದ. ಅಂತಿಮವಾಗಿ ಅದು ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷದ ಹಿಂದೆಯಷ್ಟೇ ಅ. 19ರಂದು ಮಗ ಆಕಾಶ್ ಸಾವನ್ನಪ್ಪಿದಾಗ ಅವನ ಮಗನಿಗೆ ಕೇವಲ ಎರಡು ವರ್ಷ. ನನ್ನ ಮಗನನ್ನು ನನ್ನಿಂದ ಉಳಿಸಿಕೊಳ್ಳಲಾಗಲಿಲ್ಲ. ಆತನ ಹೆಂಡತಿ ವಿಧವೆಯಾದಳು. ಹಾಗಾಗಿ, ಹೆತ್ತವರೇ ನೀವು ನಿಮ್ಮ ಹೆಣ್ಣುಮಕ್ಕಳ ಅಥವಾ ಸಹೋದರಿಯರನ್ನು ಇಂಥ ಸ್ಥಿತಿಯಿಂದ ರಕ್ಷಿಸಬೇಕು’ ಎಂದು ಸಚಿವರು ಸಲಹೆ ನೀಡಿದರು.
‘ಸ್ವಾತಂತ್ರ್ಯ ಚಳವಳಿಯಲ್ಲಿ 90 ವರ್ಷದ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ 6.32 ಲಕ್ಷ ಜನರು ತಮ್ಮ ಪ್ರಾಣತ್ಯಾಗ ಮಾಡಿದರು. ಆದರೆ, ಮದ್ಯವ್ಯಸನದಿಂದ ಪ್ರತಿವರ್ಷ 20 ಲಕ್ಷ ಜನರು ಸಾಯುತ್ತಿದ್ದರೆ’ ಎಂದೂ ಸಚಿವರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.