ನವದೆಹಲಿ : ಹತ್ಯೆಗೀಡಾದ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ರನ್ನು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ‘ಅತೀಕ್ ಜೀ‘ ಎಂದು ಗೌರವ ಪೂರ್ವಕವಾಗಿ ಸಂಬೋಧಿಸಿರುವುದನ್ನು ಕೇಳಿ ಆಕ್ರೋಶಗೊಂಡ ಕೇಂದ್ರ ಸಚಿವ ಗಿರಿರಾಜ ಸಿಂಗ್, ‘ಗೂಂಡಾಗಳ ಪೋಟೊಗಳನ್ನು ತೇಜಸ್ವಿ ಯಾದವ್ ತನ್ನ ಕಚೇರಿಯಲ್ಲಿ ನೇತು ಹಾಕಿಕೊಳ್ಳಬೇಕು‘ ಎಂದು ಹೇಳಿದ್ದಾರೆ.
ಅತೀಕ್ ಅಹ್ಮದ್ ಹತ್ಯೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ತೇಜಸ್ವಿ ಯಾದವ್, ‘ಇದು ಕೇವಲ ‘ಅತೀಕ್ ಜೀ‘ ಹತ್ಯೆಯಲ್ಲ. ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆಯ ಸಾವು‘ ಎಂದು ಹೇಳಿದ್ದರು.
ತೇಜಸ್ವಿ ಯಾದವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಗಿರಿರಾಜ ಸಿಂಗ್, ‘ಬಿಹಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರ ಪೋಟೊ ಹಾಗೂ ಗೂಂಡಾಗಳ ಪೋಟೊಗಳನ್ನು ತಮ್ಮ ಕಚೇರಿಯಲ್ಲಿ ನೇತು ಹಾಕಿಕೊಳ್ಳಬೇಕು‘ ಎಂದು ಹೇಳಿದ್ದಾರೆ.
‘ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಒಸಾಮ ಬಿನ್ ಲಾಡೆನ್ ಅನ್ನು ‘ಒಸಮಾ ಜೀ‘ ಎಂದು ಸಂಬೋಧಿಸಿದ್ದಾರೆ. ಮತಕ್ಕಾಗಿ ಇವರು ಏನು ಬೇಕಾದರು ಮಾಡುತ್ತಾರೆ‘ ಎಂದು ಕಿಡಿಕಾರಿದರು.
‘ಉಮೇಶ್ ಪಾಲ್ ಹತ್ಯೆಯಾದಾಗ ಇವರ ಬಾಯಿಯಲ್ಲಿ ಒಂದೇ ಒಂದು ಶಬ್ಧ ಹೊರಬರಲಿಲ್ಲ. ಅತೀಕ್ ಅಹ್ಮದ್ ಹತ್ಯೆಯಾಗಿರುವುದಕ್ಕೆ ಯಾಕೆ ಇವರೆಲ್ಲ ನೋವಿನಲ್ಲಿದ್ದಾರೆ?‘ ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 15ರ ರಾತ್ರಿ ಪೊಲೀಸರ ಬಿಗಿ ಭದ್ರತೆಯಲ್ಲಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುತ್ತಿರುವ ವೇಳೆ ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಬಂದ ಮೂವರು ಅತೀಕ್ ಹಾಗೂ ಅಶ್ರಫ್ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.