ADVERTISEMENT

ಕಾರು ಅಪಘಾತ: ಶಸ್ತ್ರಚಿಕಿತ್ಸೆಗೆ ಒಳಗಾದ ಶ್ರೀಪಾದ ನಾಯಕ್‌

ಪಿಟಿಐ
Published 12 ಜನವರಿ 2021, 5:39 IST
Last Updated 12 ಜನವರಿ 2021, 5:39 IST
ಗಾಯಗೊಂಡ ಶ್ರೀಪಾದ ನಾಯಕ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವುದು
ಗಾಯಗೊಂಡ ಶ್ರೀಪಾದ ನಾಯಕ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವುದು   

ಪಣಜಿ: ಉತ್ತರ ಕನ್ನಡ ಜಿಲ್ಲೆಯ ಹೊಸಕಂಬಿ ಚೆಕ್‌ಪೋಸ್ಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಕೇಂದ್ರದ ರಕ್ಷಣಾ ಮತ್ತು ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್‌ ಅವರು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್)ಸೋಮವಾರ ರಾತ್ರಿ ಶಸ್ತ್ರಚಿಕಿತ್ಸೆಗೆ ಒಳಗಾದರು ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದರು.

‘ಸದ್ಯ ಶ್ರೀಪಾದ ನಾಯಕ್‌ ಅವರ ಆರೋಗ್ಯ ಸ್ಥಿರವಾಗಿದೆ. ಎರಡೂ ಕೈ ಮತ್ತು ಕಾಲುಗಳ ಮೂಳೆ ಮುರಿದಿದ್ದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು’ ಎಂದು ಅಧಿಕಾರಿಗಳು ಹೇಳಿದರು.

‘ಸೋಮವಾರ ರಾತ್ರಿ 11.10ರ ಸುಮಾರಿಗೆ ಶ್ರೀಪಾದ ನಾಯಕ್‌ ಅವರನ್ನು ಪಣಜಿಯ ಜಿಎಂಸಿಎಚ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು’ ಎಂದು ಮೂಲಗಳು ಹೇಳಿವೆ.

ADVERTISEMENT

‘ ಶ್ರೀಪಾದ್‌ ಅವರ ಪರಿಸ್ಥಿತಿರಾತ್ರಿ ವೇಳೆ ಬಹಳ ಗಂಭೀರವಾಗಿತ್ತು. ಆದರೆ ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಜಿಎಂಸಿಎಚ್‌ನ ಡೀನ್‌ ಡಾ. ಶಿವಾನಂದ ಬಂಡೇಕರ್ ಅವರ ನೇತೃತ್ವದ ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಶ್ರೀಪಾದ ನಾಯಕ್‌ ಅವರ ಕಾರು ಸೋಮವಾರ ಸಂಜೆ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಅವರ ಪತ್ನಿ ವಿಜಯಾ ನಾಯಕ್‌ ಹಾಗೂ ಕಾರಿನಲ್ಲಿದ್ದ ಸಚಿವರ ಆಪ್ತ ಕಾರ್ಯದರ್ಶಿ ದೀಪಕ್ ದುಮೆ ಅವರು ಮೃತಪಟ್ಟಿದ್ದಾರೆ. ಶ್ರೀಪಾದ ನಾಯಕ್‌ ಅವರಿಗೆ ಗಂಭೀರ ಗಾಯಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.