ADVERTISEMENT

'ಲಾಲ್‌ ಸಲಾಮ್‌' ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಪಿಟಿಐ
Published 18 ನವೆಂಬರ್ 2021, 9:23 IST
Last Updated 18 ನವೆಂಬರ್ 2021, 9:23 IST
ಕೇಂದ್ರ ಸಚಿವೆ ಸ್ಮೃತಿ ಜುಬಿನ್‌ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಜುಬಿನ್‌ ಇರಾನಿ   

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಜುಬಿನ್‌ ಇರಾನಿ ಅವರು 'ಲಾಲ್‌ ಸಲಾಮ್‌' ಕಾದಂಬರಿಯ ಮೂಲಕ ಲೇಖಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಸ್ಮೃತಿ ಅವರ ಮೊದಲ ಕಾದಂಬರಿ ಹೊರ ಬರುತ್ತಿರುವ ಕುರಿತು ವೆಸ್ಟ್‌ಲೆಂಡ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

2010ರ ಏಪ್ರಿಲ್‌ನಲ್ಲಿ ದಾಂತೇವಾಡಾದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ 76 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಸಾವಿಗೀಡಾಗಿದ್ದರು. ಆ ಘಟನೆಯನ್ನು ಆಧರಿಸಿ ಸ್ಮೃತಿ ಅವರು ಕಾದಂಬರಿ ಹೆಣೆದಿದ್ದಾರೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ಸವಾಲುಗಳನ್ನು ಎದುರಿಸಿ, ದೇಶಕ್ಕಾಗಿ ಜೀವನ ಮುಡುಪಾಗಿಟ್ಟು ಸೇವೆ ಸಲ್ಲಿಸಿರುವ ಅಸಾಧಾರಣ ಪುರಷರು ಹಾಗೂ ಮಹಿಳೆಯರಿಗೆ ಈ ಕೃತಿಯ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ನವೆಂಬರ್‌ 29ರಂದು ಕಾದಂಬರಿಯು ಬಿಡುಗಡೆಯಾಗಲಿದೆ.

'ಕೆಲವು ವರ್ಷಗಳಿಂದ ನನ್ನ ತಲೆಯೊಳಗೆ ಕೊರೆಯುತ್ತಿದ್ದ ಕಥೆಯು ಕಡೆಗಣಿಸಲು ಬಿಡಲಿಲ್ಲ, ಅದನ್ನು ಬರಹಕ್ಕೆ ಇಳಿಸುವುದನ್ನು ತಡೆಯಲಾಗಲಿಲ್ಲ. ನಿರೂಪಣೆಯಲ್ಲಿ ತರಲು ಪ್ರಯತ್ನಿಸಿರುವ ಒಳನೋಟ, ಕಥೆಯ ಓಘ, ಅತ್ಯಂತ ಕಡಿಮೆ ವರದಿಯಾಗಿರುವ ಭಾರತದ ಪ್ರದೇಶಗಳಲ್ಲಿನ ನಡೆದಿರುವ ಸಂಗತಿಗಳು' ಕಾದಂಬರಿಯಲ್ಲಿ ಇರುವುದಾಗಿ ಬಿಜೆಪಿ ನಾಯಕಿ, ಮಾಜಿ ನಟಿ ಸ್ಮೃತಿ ಇರಾನಿ ‌ಹೇಳಿದ್ದಾರೆ.

ADVERTISEMENT

ರಾಜಕೀಯ ಮತ್ತು ಭ್ರಷ್ಟಾಚಾರದ ಹಿನ್ನೆಲೆಯ ವ್ಯವಸ್ಥೆಯ ವಿರುದ್ಧ ವಿಕ್ರಮ್‌ ಪ್ರತಾಪ್‌ ಸಿಂಗ್‌ ಹೆಸರಿನ ಯುವ ಅಧಿಕಾರಿಯು ಎದುರಿಸುವ ಸವಾಲುಗಳನ್ನು 'ಲಾಲ್‌ ಸಲಾಮ್‌' ಕಥೆ ಒಳಗೊಂಡಿದೆ.

'ಕಾದಂಬರಿಯು ಥ್ರಿಲ್ಲರ್‌, ಸಸ್ಪೆನ್ಸ್‌, ನೆನಪಿನಲ್ಲಿ ಉಳಿಯುವ ಪಾತ್ರಗಳು ಹಾಗೂ ಸನ್ನಿವೇಶಗಳನ್ನು ಒಳಗೊಂಡಿದ್ದು, ಓದುಗರನ್ನು ಮೊದಲಿಂದ ಕೊನೆಯವರೆಗೂ ಹಿಡಿದಿಡುತ್ತದೆ' ಎಂದು ವೆಸ್ಟ್‌ಲೆಂಡ್‌ನ ಪ್ರಕಾಶಕ ಕಾರ್ತಿಕ ವಿ.ಕೆ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.