ನವದೆಹಲಿ: ಇಸ್ರೇಲ್‌ನೊಂದಿಗಿನ ಒಪ್ಪಂದದ ಭಾಗವಾಗಿ ಭಾರತ ಸರ್ಕಾರವು 2017 ರಲ್ಲಿ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದೆ ಎಂದು ವರದಿ ಪ್ರಕಟಿಸಿರುವ ನ್ಯೂಯಾರ್ಕ್ ಟೈಮ್ಸ್ (ಎನ್‌ವೈಟಿ) ವಿರುದ್ಧ ಕೇಂದ್ರ ಸಚಿವ, ಜನರಲ್ ವಿ. ಕೆ. ಸಿಂಗ್ ಶನಿವಾರ ಕಿಡಿ ಕಾರಿದ್ದಾರೆ. ‘ನ್ಯೂಯಾರ್ಕ್ ಟೈಮ್ಸ್’ ಒಂದು ‘ಸುಪಾರಿ ಮಾಧ್ಯಮ’ ಎಂದು ಕರೆದಿದ್ದಾರೆ.
ಇಸ್ರೇಲಿ ಗೂಢಚರ್ಯೆ ತಂತ್ರಾಂಶ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯು 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ನಡೆದ ಸುಮಾರು 2 ಶತಕೋಟಿ ಡಾಲರ್‌ಗಳ ಒಪ್ಪಂದದ ಪ್ರಮುಖಾಂಶ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.
ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಕಂಪನಿಯು ತಯಾರಿಸುತ್ತಿರುವ ಪೆಗಾಸಸ್ ಬೇಹುಗಾರಿಕೆ ತಂತ್ರಾಂಶ ಬಳಸಿ ಜಗತ್ತಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ಅದರಲ್ಲಿ ಭಾರತದ ವಿರೋಧ ಪಕ್ಷಗಳ ಮುಖಂಡರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಇದ್ದಾರೆ ಎಂಬ ಆರೋಪ ಕಳೆದ ವರ್ಷ ಕೇಳಿಬಂದಿತ್ತು. ಇದು ಭಾರತದಲ್ಲಿ ವಿವಾದಕ್ಕೂ ಕಾರಣವಾಗಿತ್ತು.
ನ್ಯೂಯಾರ್ಕ್ ಟೈಮ್ಸ್ ವರದಿಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ಸಿಂಗ್ ‘ನೀವು ಎನ್‌ವೈಟಿಯನ್ನು ನಂಬುತ್ತೀರಾ? ಅದು ‘ಸುಪಾರಿ ಮಾಧ್ಯಮ’ ಎಂದು ಕರೆದಿದ್ದಾರೆ.
ಸಿಂಗ್ ಅವರು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರೂ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.