ADVERTISEMENT

ಮದುವೆ ಆಗದ ಮಗಳಿಗೆ ಪಾಲಕರಿಂದ ಜೀವನಾಂಶ ಪಡೆಯುವ ಹಕ್ಕಿದೆ– ಅಲಹಾಬಾದ್ ಹೈಕೋರ್ಟ್‌

ಪಿಟಿಐ
Published 18 ಜನವರಿ 2024, 15:47 IST
Last Updated 18 ಜನವರಿ 2024, 15:47 IST
<div class="paragraphs"><p>court</p></div>

court

   

ಪ್ರಯಾಗರಾಜ್ : ಧರ್ಮ ಯಾವುದೇ ಆಗಿರಲಿ, ವಯಸ್ಸು ಎಷ್ಟೇ ಆಗಿರಲಿ ಮದುವೆ ಆಗದ ಮಗಳು ತನ್ನ ತಂದೆ–ತಾಯಿಯಿಂದ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ ಕಾಯ್ದೆ 2005’ರ ಅಡಿಯಲ್ಲಿ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾಳೆ ಎಂದು ಅಲಹಾಬಾದ್ ಹೈಕೋರ್ಟ್‌ ಹೇಳಿದೆ.

ನೈಮುಲ್ಲಾ ಶೇಖ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ಮಾತು ಹೇಳಿದೆ. ಹೆಣ್ಣುಮಕ್ಕಳಿಗೆ ಜೀವನಾಂಶ ನೀಡಬೇಕು ಎಂದು ಅಧೀನ ನ್ಯಾಯಾಲಯವೊಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಶೇಖ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

‘ಮದುವೆಯಾಗದ ಹೆಣ್ಣುಮಗಳು ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ, ಆಕೆಯ ವಯಸ್ಸು ಎಷ್ಟೇ ಆಗಿರಲಿ, ಆಕೆಗೆ ಜೀವನಾಂಶ ಪಡೆಯುವ ಹಕ್ಕು ಇದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಜೀವನ ನಿರ್ವಹಣೆಯ ಹಕ್ಕಿನ ಪ್ರಶ್ನೆ ಇದ್ದಾಗ ಅನ್ವಯವಾಗುವ ಇತರ ಕಾನೂನುಗಳ ಬಗ್ಗೆಯೂ ಕೋರ್ಟ್‌ಗಳು ಗಮನ ಹರಿಸಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುತ್ತಿದೆ’ ಎಂದು ನ್ಯಾಯಮೂರ್ತಿ ಜ್ಯೋತ್ಸ್ನಾ ಶರ್ಮ ಅವರು ಹೇಳಿದ್ದಾರೆ.

ಶೇಖ್‌ ಅವರ ಮೂವರು ಹೆಣ್ಣುಮಕ್ಕಳು ಈ ಕಾಯ್ದೆಯ ಅಡಿಯಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ತಂದೆ ಮತ್ತು ಮಲತಾಯಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಮಧ್ಯಂತರ ಜೀವನಾಂಶವನ್ನು ಮೂವರು ಹೆಣ್ಣುಮಕ್ಕಳಿಗೆ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯವು ಆದೇಶಿಸಿತ್ತು. ಈ ಆದೇಶವನ್ನು ಶೇಖ್ ಅವರು ಪ್ರಶ್ನಿಸಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೆಣ್ಣುಮಕ್ಕಳಿಗೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ, ಅವರು ಹಣಕಾಸಿನ ವಿಚಾರವಾಗಿ ಸ್ವತಂತ್ರರಾಗಿದ್ದಾರೆ ಎಂದು ಹೇಳಿದ್ದರು.

ಆದರೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹೆಣ್ಣುಮಕ್ಕಳು ಜೀವನಾಂಶ ಕೇಳುವಂತೆ ಇಲ್ಲ ಎಂಬ ವಾದವನ್ನು ಒಪ್ಪಲು ಆಗದು ಎಂದು ಜನವರಿ 10ರಂದು ನೀಡಿರುವ ಆದೇಶದಲ್ಲಿ ಹೈಕೋರ್ಟ್ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.