ಉನ್ನಾವೊ (ಉತ್ತರ ಪ್ರದೇಶ): ಉನ್ನಾವೊ ಅತ್ಯಾಚಾರ ಸಂತ್ರಸ್ತೆ ವಾಸವಿದ್ದ ಶೆಡ್‌ನತ್ತ ಬಂದ ಅತ್ಯಾಚಾರ ಆರೋಪಿಗಳು, ಶೆಡ್‌ಗೆ ಬೆಂಕಿ ಹಚ್ಚಿದ್ದಲ್ಲದೆ, ಇಬ್ಬರು ಹಸುಗೂಸುಗಳನ್ನು ಬೆಂಕಿಯೊಳಗೆ ಎಸೆದ ಹೃದಯ ವಿದ್ರಾವಕ ಘಟನೆ ಮಂಗಳವಾರ ನಡೆದಿದೆ.
‘ಪ್ರಕರಣ ಹಿಂಪಡೆಯಲು ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಈ ಅಮಾನವೀಯ ಕೃತ್ಯ ನಡೆದಿದ್ದು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಸಂತ್ರಸ್ತೆಯ ಆರು ತಿಂಗಳ ಗಂಡು ಮಗು ಹಾಗೂ ಆಕೆಯ ಎರಡು ತಿಂಗಳ ತಂಗಿ ಕ್ರಮವಾಗಿ ಶೇ 35 ಹಾಗೂ ಶೇ 45ರಷ್ಟು ಪ್ರಮಾಣದ ಸುಟ್ಟ ಗಾಯಗಳಿಂದ ಬಳಲಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಮುಖ್ಯ ವೈದ್ಯಾಧಿಕಾರಿ ಸುಶೀಲ್ ಶ್ರೀವಾಸ್ತವ್ ತಿಳಿಸಿದ್ದಾರೆ.
‘ಅತ್ಯಾಚಾರ ಆರೋಪಿಗಳ ಪೈಕಿ ಇಬ್ಬರು ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಇತರ ಐದು ಮಂದಿಯ ಜೊತೆಗೆ ಸೋಮವಾರ ಸಂಜೆ ಸಂತ್ರಸ್ತೆಯ ಕುಟುಂಬದವರು ವಾಸವಿದ್ದ ಶೆಡ್‌ಗೆ ತೆರಳಿದ್ದ ಇವರು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದರು. ಸಂತ್ರಸ್ತೆ ಒಪ್ಪಿರಲಿಲ್ಲ. ಇದರಿಂದ ಕೆರಳಿದ್ದ ಅವರು ಸಂತ್ರಸ್ತೆ ಹಾಗೂ ಆಕೆಯ ತಾಯಿ ಮೇಲೆ ಹಲ್ಲೆ ನಡೆಸಿದ್ದರು. ನಂತರ ಶೆಡ್‌ಗೆ ಬೆಂಕಿ ಹಚ್ಚಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಸಂತ್ರಸ್ತೆಯ ಚಿಕ್ಕಪ್ಪ ಹಾಗೂ ಅಜ್ಜ ಕೂಡ ಆರೋಪಿಗಳ ಜೊತೆಗಿದ್ದರು. ಇವರು ಕೊಡಲಿಯಿಂದ ಆಕೆಯ ತಂದೆಯ ಮೇಲೆ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೂರ್ವ ವಿಭಾಗದ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಸಿಂಗ್ ತಿಳಿಸಿದ್ದಾರೆ.
ಮಗಳು ಹಾಗೂ ಆಕೆಯ ಮಗನನ್ನು ಸುಟ್ಟು ಹಾಕುವ ಉದ್ದೇಶದಿಂದಲೇ ಆರೋಪಿಗಳು ಶೆಡ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.
ಈ ದಲಿತ ಬಾಲಕಿಯ ಮೇಲೆ 2022ರ ಫೆಬ್ರುವರಿ 13ರಂದು ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.