ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ದೋಷಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲ್‌ದೀಪ್ ಸಿಂಗ್ ಸೆಂಗಾರ್‌ಗೆ ಮಗಳ ಮದುವೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಾಧೀಶರಾದ ಮುಕ್ತಾ ಗುಪ್ತಾ ಮತ್ತು ಪೂನಂ ಎ. ಬಂಬಾ ಅವರಿದ್ದ ಪೀಠವು ಈ ಜಾಮೀನು ಮಂಜೂರು ಮಾಡಿದೆ. ಜಾಮೀನು ಅವಧಿಯು ಜನವರಿ 27ರಿಂದ ಫೆಬ್ರುವರಿ 10ರವರೆಗೆ ಇರಲಿದೆ. ಈ ಅವಧಿಯಲ್ಲಿ ಪ್ರತಿದಿನವೂ ಸಂಬಂಧಪಟ್ಟ ಪೊಲೀಸ್ ಠಾಣಾ ಅಧಿಕಾರಿಗೆ ಸೆಂಗಾರ್ ವರದಿ ಮಾಡಿಕೊಳ್ಳಬೇಕು ಮತ್ತು ತಲಾ ₹1 ಲಕ್ಷದ ಎರಡು ಠೇವಣಿಗಳನ್ನು ಇರಿಸಬೇಕು ಎಂದು ಪೀಠ ಆದೇಶಿಸಿದೆ.
ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಲಖನೌದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಅದಕ್ಕಾಗಿ ಸಿದ್ಧತೆಗಳನ್ನು ಮಾಡಬೇಕಾಗಿರುವುದರಿಂದ ಕುಲದೀಪ್ ಸೆಂಗಾರ್ ಅವರಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರಾದ ಎನ್. ಹರಿಹರನ್ ಮತ್ತು ಪಿ.ಕೆ. ದುಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
2017ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣದಲ್ಲಿ ಕುಲ್‌ದೀಪ್ ಅಪರಾಧಿ ಎಂಬುದು ಸಾಬೀತಾಗಿತ್ತು. ಆತನನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.