ನವದೆಹಲಿ : ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗರ್, ವಿಚಾರಣಾ ನ್ಯಾಯಾಲಯದ ತೀರ್ಪು ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಬುಧವಾರ ದೆಹಲಿ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ.
ಅವರ ಅರ್ಜಿಯಲ್ಲಿ ಆಕ್ಷೇಪಣೆಗಳಿದ್ದು, ಅಲ್ಲಿನ ಎಲ್ಲಾ ತಪ್ಪುಗಳನ್ನು ಸರಿಪಡಿಸಿದ ನಂತರ ಅರ್ಜಿಯ ವಿಚಾರಣೆ ನಡೆಯಲಿದೆ.
ಸೆಂಗರ್ ಅವರು ಶಿಕ್ಷೆಗೊಳಗಾದ ವಿಚಾರಣಾ ನ್ಯಾಯಾಲಯದ 2019ರ ಡಿ. 16ರ ತೀರ್ಪನ್ನು ರದ್ದುಗೊಳಿಸುವಂತೆ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವ ಡಿ. 20ರ ಆದೇಶವನ್ನು ಕೈಬಿಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
2017ರಲ್ಲಿ ಸೆಂಗರ್ ಅಪ್ರಾಪ್ತಳನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆವಿಚಾರಣಾ ನ್ಯಾಯಾಲಯವು ಸೆಂಗರ್‌ಗೆ ಐಪಿಸಿ ಸೆಕ್ಷನ್ 376 (2) ಮತ್ತು ವಿವಿಧ ನಿಬಂಧನೆಗಳು ಸೇರಿದಂತೆ ಪೋಕ್ಸೊ ಕಾಯ್ದೆ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.