ಉನ್ನಾವ್ (ಉತ್ತರ ಪ್ರದೇಶ): ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿಗಳೇ ಇಟ್ಟ ಬೆಂಕಿಗೆಬೆಂದು ಪ್ರಾಣ ಬಿಟ್ಟ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಅಂತಿಮ ಸಂಸ್ಕಾರವನ್ನು ಮುಖ್ಯಮಂತ್ರಿ ಬರುವ ವರೆಗೆ ನಡೆಸದೇ ಇರಲು ಕುಟುಂಬಸ್ಥರು ನಿರ್ಧಿರಿಸಿದ್ಧಾರೆ.
ಸದ್ಯ ಸಂತ್ರಸ್ತೆಯ ಮೃತದೇಹವನ್ನು ಮನೆಯಲ್ಲೇ ಇರಿಸಿಕೊಂಡಿರುವ ಕುಟುಂಬಸ್ಥರು, ‘ಮುಖ್ಯಮಂತ್ರಿ ಆಗಮಿಸಬೇಕು, ಸಂತ್ರಸ್ತೆಯ ಸೋದರಿಗೆ ಸರ್ಕಾರಿ ಕೆಲಸ ನೀಡಬೇಕು,’ ಎಂದು ಆಗ್ರಹಿಸಿದ್ದಾರೆ.
‘ಮುಖ್ಯಮಂತ್ರಿ ಯೋಗಿ ಅವರು ಇಲ್ಲಿಗೆ ಬರಲೇಬೇಕು. ಅಲ್ಲದೆ, ನನಗೆ ಒಂದು ಸರ್ಕಾರಿ ನೌಕರಿ ಕಲ್ಪಿಸಬೇಕು. ಈ ಬಗ್ಗೆ ಅವರು ತಕ್ಷಣ ನಿರ್ಧಾರ ಕೈಗೊಳ್ಳಲಿ,’ ಎಂದು ಸಂತ್ರಸ್ತೆ ಸೋದರಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ ಸಂತ್ರಸ್ತೆಯ ಅಂತಿಮ ವಿಧಿವಿಧಾನಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸರ್ಕಾರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸುತ್ತಿದೆ.
ಸಂತ್ರಸ್ತೆ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ₹25 ಲಕ್ಷ ಪರಿಹಾರ ಘೋಷಿಸಿದೆ. ಮನೆ ನಿರ್ಮಿಸಿಕೊಡುವ ಭರವಸೆ ನೀಡಿದೆ. ಇದರ ಜತೆಗೆ ಪ್ರಕರಣದ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿರುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸಂತ್ರಸ್ತೆ ಸಾವಿನ ಕುರಿತು ಶನಿವಾರ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರು, ಸಾವಿನ ವಿಷಯ ಕೇಳಿ ತೀವ್ರ ದುಃಕವಾಗಿದೆ . ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಿರುವುದಾಗಿ ತಿಳಿಸಿದ್ದರು.
ಇನ್ನು ಮಗಳ ಸಾವಿನ ಹಿನ್ನೆಲೆಯಲ್ಲಿ ಮಾತನಾಡಿದ್ದ ಸಂತ್ರಸ್ತೆ ತಂದೆ, ‘ನನಗೆ ಹಣ ಬೇಡ. ಯಾವುದೇ ನೆರವೂ ಬೇಡ. ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಕೊಲ್ಲಬೇಕು. ಇದೇ ಆಕೆಗೆ ಸಿಗುವ ನ್ಯಾಯ,’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.